ಬಿಜೆಪಿ ಹಬ್ಬದ ಸಂದರ್ಭದಲ್ಲೂ ಸಾರಿಗೆ ನೌಕರರಿಗೆ ವೇತನ ನೀಡದೆ ಕಣ್ಣೀರು ಹಾಕಿಸಿದ್ದನ್ನು ಜನತೆ ಮರೆತಿಲ್ಲ: ಕಾಂಗ್ರೆಸ್

Update: 2024-10-10 10:00 GMT

ಬೆಂಗಳೂರು: ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಭರಪೂರ ಸುಳ್ಳುಗಳು ತಯಾರಾಗುತ್ತಿವೆ, ಆದರೆ ಆ ಸುಳ್ಳುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ ಅಷ್ಟೇ. ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಳ್ಳಿದ ಬಿಜೆಪಿ ಈಗ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಆಯುಧ ಪೂಜೆಗೆ ಬಸ್ಸುಗಳ ಪೂಜಾ ಖರ್ಚಿಗೂ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ. ಪ್ರತಿ ಬಸ್ಸಿಗೆ ಕೇವಲ ರೂ.100 ನೀಡುವಷ್ಟರ ಮಟ್ಟಿಗೆ ಸಾರಿಗೆ ಇಲಾಖೆ ದಿವಾಳಿಯಾಗಿದೆ ಎಂಬ ಬಿಜೆಪಿ 'ಎಕ್ಸ್'ನಲ್ಲಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ 'ಎಕ್ಸ್'ನಲ್ಲಿ ಹಳೆಯ ವಿಡಿಯೊವೊಂದನ್ನು ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

'2008ರಿಂದ 2013ರ ವರೆಗೆ ಬಿಜೆಪಿ ಅವಧಿಯಲ್ಲಿ ಪ್ರತಿ ಬಸ್ ಗೆ ಕೊಡುತ್ತಿದ್ದ ಹಣ 30 ರೂ. ಮತ್ತೆ ಬಿಜೆಪಿಯ 2019ರಿಂದ 2023ರವರೆಗೆ ಅವಧಿಯಲ್ಲಿ ಕೊಡುತ್ತಿದ್ದ ಹಣ ₹100. ಈಗ ಮತ್ತೆ ನಮ್ಮ ಸರಕಾರ 100 ರೂಪಾಯಿಯಿಂದ 250 ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಸುಳ್ಳಿನ ಸರಮಾಲೆ ಕಟ್ಟುವ ರಾಜ್ಯ ಬಿಜೆಪಿ ಆಡಳಿತಾವಧಿಯಲ್ಲಿ ಹಬ್ಬದ ಸಂದರ್ಭದಲ್ಲೂ ಸಾರಿಗೆ ನೌಕರರಿಗೆ ವೇತನ ನೀಡದೆ ಕಣ್ಣೀರು ಹಾಕಿಸಿದ್ದನ್ನು ಜನತೆ ಮರೆತಿಲ್ಲ, ಬಸ್ಸುಗಳ ಪೂಜೆಗೆ ಹೂವು, ನಿಂಬೆಹಣ್ಣಿಗೂ ಹಣ ಕೊಡದೆ ನೌಕರರು ಸ್ವಂತ ಹಣದಿಂದ ಪೂಜೆ ಮಾಡಿದ್ದನ್ನು ರಾಜ್ಯದ ಜನ ಮರೆತಿಲ್ಲ. ಸಾರಿಗೆ ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇಟ್ಟ ಕೀರ್ತಿ ನಿಮಗೇ ಸಲ್ಲಬೇಕು. ಸಂಬಳ ನೀಡದೆ ನೌಕರರ ಮನೆಯ ಹಬ್ಬದ ಸಂಭ್ರಮ ಕಿತ್ತುಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ಮಕ್ಕಳು “ಸಿಎಂ ಅಂಕಲ್ ಸಂಬಳ ಕೊಡಿ” ಎಂದು ಅಂಗಲಾಚಿದ ಕರುಣಾಜನಕ ಸ್ಥಿತಿಯು ಇತಿಹಾಸವಾಗಿದೆ ಉಳಿದಿದೆ' ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News