ಬೆಂಗಳೂರು ನಗರದಲ್ಲಿ ಪಾದಯಾತ್ರೆಗೆ ಅವಕಾಶವಿಲ್ಲ: ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ಸಂಬಂಧ ಬಿಜೆಪಿ-ಜೆಡಿಎಸ್ ಕೈಗೊಂಡಿರುವ ಪಾದಯಾತ್ರೆಯ ರೂಪುರೇಷೆಗಳ ಕುರಿತು ನನ್ನ ಮಟ್ಟದಲ್ಲಿ ಇದುವರೆಗೂ ಯಾರೂ ಬಂದು ಅನುಮತಿ ಕೇಳಿಲ್ಲ. ಜೊತೆಗೆ ಬೆಂಗಳೂರು ನಗರದಲ್ಲಿ ಪಾದಯಾತ್ರೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹೈಕೋರ್ಟಿನ ಆದೇಶದನ್ವಯ ನಗರದಲ್ಲಿ ಪ್ರತಿಭಟನೆ, ರ್ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಆದರೂ, ಸಹ ಪೂರಕವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದರು.
ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆಗೆ ನನ್ನ ಮಟ್ಟದಲ್ಲಿ ಯಾರೂ ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ. ಎಲ್ಲಿಂದ, ಯಾವ ರೀತಿ ಪಾದಯಾತ್ರೆ ಮಾಡುತ್ತಾರೆಂಬುದು ಇನ್ನೂ ಗೊತ್ತಿಲ್ಲ. ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ. ಆದರೂ, ಮುನ್ನೆಚ್ಚರಿಕೆ ದೃಷ್ಠಿಯಿಂದ ನಾವು ಪೂರಕವಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.