ಸರಕಾರಿ ಶಾಲೆಗಳಲ್ಲಿ ಮೇಲ್ವಿಚಾರಣೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ವಿರೋಧ

Update: 2024-12-05 14:58 GMT

ಪ್ರೊ.ನಿರಂಜನಾರಾಧ್ಯ ವಿ.ಪಿ.

ಬೆಂಗಳೂರು, ಡಿ.5: ಸರಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮತ್ತು ಮೇಲ್ವಿಚಾರಣೆಗಾಗಿ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿ ಪ್ರಸ್ತಾವನೆಯನ್ನು ಕೈಬಿಟ್ಟು, ಶಿಕ್ಷಣ ಹಕ್ಕು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಸಚಿವರ ಈ ಪ್ರಸ್ತಾಪವು ಸಂವಿಧಾನದ ಪರಿಚ್ಛೇದ 21ಎ ಅಡಿಯಲ್ಲಿ ಶಿಕ್ಷಣದ ಮೂಲಭೂತ ಹಕ್ಕಿನ ಜಾರಿಗಾಗಿ ರೂಪಿಸಿರುವ ಶಿಕ್ಷಣ ಹಕ್ಕು ಕಾಯಿದೆಯ ಪ್ರಕರಣ 21 ಮತ್ತು 22 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಶಿಕ್ಷಣ ಹಕ್ಕು ಕಾಯಿದೆಯ ಅನ್ವಯ ಶಾಲೆಗಳ ಸುಧಾರಣೆ ಮತ್ತು ಮೇಲುಸ್ತುವಾರಿಗೆ ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ ಎಂದಿದ್ದಾರೆ.

ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಶಾಲಾ ಶಿಕ್ಷಣ ಸಚಿವರ ಪ್ರಸ್ತಾಪವು ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಉಲ್ಲಂಘನೆಯಾಗಿದ್ದು, ಎಸ್‍ಡಿಎಂಸಿಗಳನ್ನು ದುರ್ಬಲ ಗೊಳಿಸುವುದಲ್ಲದೆ, ಶಾಲಾ ನಿರ್ವಹಣೆ ಮತ್ತು ಮೇಲುಸ್ತುವಾರಿಯಲ್ಲಿ ಪಕ್ಷ ರಾಜಕಾರಣದ ಹಸ್ತಕ್ಷೇಪಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಸಚಿವರ ಈ ನಡೆ ಕಾನೂನುಬಾಹಿರವಾಗಿದ್ದು, ಈ ಹಿಂದೆ ಅವರದೇ ಯುಪಿಎ ಸರಕಾರ ರೂಪಿಸಿದ್ದ ಶಿಕ್ಷಣ ಹಕ್ಕು ಕಾಯಿದೆಯನ್ನು ತಿಳಿಗೊಳಿಸಿ ದುರ್ಬಲಗೊಳಿಸುವ ನಡೆಯಾಗಿದೆ. ಕೇಂದ್ರದ ಎನ್‍ಡಿಎ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 ಮೂಲಕ ಶಿಕ್ಷಣದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸಿದ ರೀತಿಯಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮಾಡಲು ಹೊರಟಿರುವುದು ದುರದೃಷ್ಟಕರ. ಶಿಕ್ಷಣದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸಿ ಕ್ರಮೇಣವಾಗಿ ಸಾಂವಿಧಾನಿಕ ಹಕ್ಕನ್ನು ಕಸಿಯುವ ಸ್ಪಷ್ಟ ಸೂಚನೆಯಾಗಿದೆ ಎಂದು ಅವರು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News