ಪರಿಷತ್‌ ಚುನಾವಣೆ | ಪಕ್ಷಕ್ಕೆ ದುಡಿದಿರುವ ನಾಯಕರಿಗೆ ಅವಕಾಶ ನೀಡಿ : ಜಿ.ಪರಮೇಶ್ವರ್

Update: 2024-05-29 19:24 IST
ಪರಿಷತ್‌ ಚುನಾವಣೆ | ಪಕ್ಷಕ್ಕೆ ದುಡಿದಿರುವ ನಾಯಕರಿಗೆ ಅವಕಾಶ ನೀಡಿ : ಜಿ.ಪರಮೇಶ್ವರ್
  • whatsapp icon

ಬೆಂಗಳೂರು : ಯಾರು ಪಕ್ಷಕ್ಕಾಗಿ ದುಡಿದಿದ್ದಾರೋ, ಯಾವ ಸಮುದಾಯ ಪಕ್ಷದ ಜೊತೆ ನಿಂತಿದೆಯೂ ಅವರಿಗೆ ವಿಧಾನ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನನ್ನ ಹೇಳಿಕೆಯನ್ನು ಯಾರು ತಪ್ಪಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯ ಇಲ್ಲ. ಪ್ರಮುಖರೊಂದಿಗೆ ಸಮಾಲೋಚನೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾಗಿರುವುದು ಪ್ರಕ್ರಿಯೆ. ಯಾರು ಸಹ ಇದನ್ನು ತಪ್ಪೆಂದು ಹೇಳಲಾಗುವುದಿಲ್ಲ. ನಾನು ಸಹ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವದಿಂದ ಆ ಮಾತನ್ನು ಹೇಳಿದ್ದೇನೆʼ ಎಂದರು.

ಪಕ್ಷಕ್ಕಾಗಿ ಕೆಲಸ ಮಾಡಿದ ಅನೇಕರಿಗೆ ಅನುಭವ ಇರುತ್ತದೆ. ಅಂತವರೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆಯಬೇಕು ಎಂಬುದನ್ನು ಹೇಳಿದ್ದೇನೆ ಎಂದ ಅವರು, ಏಳು ಸ್ಥಾನಗಳು ನಮ್ಮ ಪಕ್ಷಕ್ಕೆ ಬರುತ್ತವೆ. ಆದರೆ, ಈಗಾಗಲೇ 300 ಅರ್ಜಿ ಬಂದಿವೆ ಎಂಬುದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆಯ್ಕೆ ಮಾಡುವುದು ಕಷ್ಟದ ಕೆಲಸ. ಹೈಪವರ್ ಕಮಿಟಿ ರಚಿಸಿ, ಸಮಿತಿ ಜೊತೆ ಚರ್ಚಿಸಿದರೆ ಸಲಹೆಗಳು ಬರುತ್ತವೆ. ಹೈಪವರ್ ಕಮಿಟಿ ರಚಿಸುವ ಸಮಯ ಮೀರಿದೆ ಎಂದು ಹೇಳಿದರು.

ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಲ್ಲ. ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳಿವೆ. ಯಾವುದಾದರು ತೀರ್ಮಾನ ತೆಗೆದುಕೊಳ್ಳುವಾಗ ಮುಖ್ಯಮಂತ್ರಿ ಅವರ ಗಮನಕ್ಕೆ ತರಬೇಕಾಗುತ್ತದೆ. ಅವರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News