ಸಂಸತ್ ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ಸುಧಾಕರ್ ರನ್ನು ಹೋಗಲು ಬಿಡುವುದಿಲ್ಲ : ಪ್ರದೀಪ್ ಈಶ್ವರ್

Update: 2024-03-25 18:07 GMT

ಬೆಂಗಳೂರು: ‘ಕೋವಿಡ್ ಅಕ್ರಮದ ಆರೋಪಿಯಾಗಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಗೆ ಬಿಜೆಪಿಯವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿರುವುದು ಪ್ರಜಾಪ್ರಭುತ್ವದ ಸಾವಿಗೆ ಮುನ್ನುಡಿಯಾಗಿದೆ’ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರೊನ ಸೋಂಕಿನ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ 2,200 ಕೋಟಿ ರೂ.ಹಗರಣ ಮಾಡಿದ್ದಾರೆಂಬ ಆರೋಪವಿತ್ತು. 40ಸಾವಿರ ಕೋಟಿ ರೂ.ಹಗರಣ ನಡೆದಿದೆ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ. ಆದರೂ, ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ ಎಂದು ದೂರಿದರು.

ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸಹಾಯ ಮಾಡಿರುವ ಕಾರಣ ಸುಧಾಕರ್ ಗೆ ಟಿಕೆಟ್ ದೊರೆತಿದೆ. ಹಿರಿಯ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಬಾತಿ, ದೀರ್ಘಾದಂಡ ನಮಸ್ಕಾರ.. ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಅವರಿಗೆ ಟಿಕೆಟ್ ಸಿಕ್ಕಿರಬಹುದು ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು.

ಸಾಮಾನ್ಯ ಮನುಷ್ಯನಾದ ನಾನು, ನನ್ನ ಸಂಪೂರ್ಣ ಆದಾಯದ ಬಗ್ಗೆ ನಾಳೆಯೇ ಲೆಕ್ಕ ನೀಡಲು ಸಿದ್ದನಿದ್ದೇನೆ. ನೀವು ನನ್ನ ಮೇಲೆ ಐಟಿ, ಇಡಿ ಬಿಡುವ ಪ್ರಮೇಯವೇ ಬೇಡ. ಡಾ.ಕೆ.ಸುಧಾಕರ್ ಅವರೇ, ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮ ಆದಾಯದ ಮೂಲವನ್ನು ಘೋಷಣೆ ಮಾಡುತ್ತೀರಾ?. ನಿಮಗೆ ಆ ಧೈರ್ಯ ಇದೆಯೇ? ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಸುಧಾಕರ್ ನನ್ನ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ಹಾಕಿಸಿದರು. ನಾನು ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡಿ ಜಾಮೀನು ದೊರೆಯುವಂತೆ ಮಾಡಿಕೊಳ್ಳುತ್ತೇನೆ. ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿ ಅಚಾನಕ್ ಆಗಿ ಗೆದ್ದರೆ ಎಂದು ಸಾಂದರ್ಭಿಕವಾಗಿ ಹೇಳುತ್ತಿದ್ದೇನೆ. ಈ ವ್ಯಕ್ತಿ ಗೆಲ್ಲಲ್ಲ, ಗೆಲ್ಲಬಾರದು ಎಂದು ಪ್ರದೀಪ್ ಈಶ್ವರ್ ಹೇಳಿದರು.

ಕೆ.ಸುಧಾಕರ್ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದಕ್ಕೆ ನಾನು ಹೇಳಿದೆ ಮಾನ ಇದ್ದವರು ನಷ್ಟವಾಗಿದೆ ಎಂದು ಪ್ರಕರಣ ಹಾಕಬೇಕು, ಇವರು ಏಕೆ ಹಾಕಿದರು?. ಅವರಿಗೆ ಮಾನ ಇದೆ ಎಂದು ಸಾಬೀತು ಮಾಡಲಿ, ನಾನು ಅವರು ಹೇಳಿದಂತೆ ಕೇಳುತ್ತೇನೆ ಎಂದು ಪ್ರದೀಪ್ ಈಶ್ವರ್ ಸವಾಲೆಸೆದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಭಾಗದ ಜನತೆ ನನ್ನ ಮಾತನ್ನು ಗಮನವಿಟ್ಟು ಕೇಳಬೇಕು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರು ನೀವು ಬೆಂಬಲ ನೀಡಬೇಕು. ಕೆ.ಸುಧಾಕರ್ ಗೆದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಪ್ರದೀಪ್ ಈಶ್ವರ್ ಎಚ್ಚರಿಸಿದರು.

ನಾನು ಚಿಕ್ಕಬಳ್ಳಾಪುರದಲ್ಲಿ 10 ಆ್ಯಂಬುಲೆನ್ಸ್ ಗಳನ್ನು ಉಚಿತವಾಗಿ ಜನರ ಸೇವೆಗೆ ಬಿಟ್ಟಿದ್ದೇನೆ. ತಾವು ಆರೋಗ್ಯ ಸಚಿವರಾಗಿದ್ದವರು ಏನು ಕೆಲಸ ಮಾಡಿದ್ದೀರಾ ಹೇಳಿ, ಚಿಕ್ಕಬಳ್ಳಾಪುರ ಉತ್ಸವ ಮಾಡಿ ಸಿನಿಮಾ ನಟರುಗಳನ್ನು ಕರೆದುಕೊಂಡು ಬಂದು ಸಾಮಾನ್ಯ ಹುಡುಗನ ವಿರುದ್ಧ ಸೋತಿರಿ ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.

ಸುಧಾಕರ್ ಅವರು ಕೊರೋನಾ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತನಿಖೆಯಿಂದ ತಪ್ಪಿಸಿಕೊಳ್ಳಲು ಯಾರ, ಯಾರ ಕಾಲಿಗೆ ಬಿದ್ದಿದ್ದಾರೆ ಎಂದು ಗೊತ್ತಿದೆ. ಅವರು ಪ್ರಾಮಾಣಿಕರಾಗಿದ್ದರೆ ಭಯ ಏಕೆ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಸಂಸತ್ತಿನ ಮೆಟ್ಟಿಲು ತುಳಿಯಲು ಬಿಡುವುದಿಲ್ಲ: ‘ಸಂಸತ್ ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ಡಾ.ಕೆ.ಸುಧಾಕರ್ ಹೋಗಲು ಬಿಡುವುದಿಲ್ಲ. ಇಡೀ ಕೇಂದ್ರ ಸರಕಾರವೇ ಬಂದು ನಿಂತುಕೊಂಡರೂ ಸುಧಾಕರ್ ಅವರು ಸಂಸತ್ತಿನ ಮೆಟ್ಟಿಲನ್ನು ತುಳಿಯಲು ಬಿಡುವುದಿಲ್ಲ’ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News