ರಾಜ್ಯ ಸರಕಾರ ಸಾಲ ನೀಡದಿರುವುದರಿಂದ ಜನರು ಮೈಕ್ರೋ ಫೈನಾನ್ಸ್‌ನ ಮೊರೆ ಹೋಗಿದ್ದಾರೆ : ಪ್ರತಿಪಕ್ಷ ನಾಯಕ ಆರ್.ಅಶೋಕ್‌

Update: 2025-01-27 15:27 IST
Photo of R.Ashok

ಆರ್.ಅಶೋಕ್‌

  • whatsapp icon

ಬೆಂಗಳೂರು : ಕಾಂಗ್ರೆಸ್ ಸರಕಾರ ಮಾಡಿದ ಪಾಪದಿಂದಾಗಿ ಜನರು ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆಯುತ್ತಿದ್ದಾರೆ. ಸರಕಾರವೇ ಸಾಲ ನೀಡಿದ್ದರೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23 ರಲ್ಲಿ ಬಿಜೆಪಿ ಸರಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25 ರಲ್ಲಿ ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ. ತಾಂಡಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 110 ಕೋಟಿ ರೂ. ನೀಡಿದರೆ ಕಾಂಗ್ರೆಸ್ 60 ಕೋಟಿ ರೂ. ನೀಡಿದೆ.

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 50 ಕೋಟಿ ರೂ. ನೀಡಿದೆ. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಹಣ ಫ್ರೀಜ್ ಆಗಿದೆ. ನಿಗಮಗಳಿಗೆ 1,700 ಕೋಟಿ ರೂ. ನೀಡಬೇಕಿದ್ದು, 643 ಕೋಟಿ ರೂ. ನೀಡಲಾಗಿದೆ. ಅಂದರೆ ಎಲ್ಲ ನಿಗಮಗಳಿಗೆ ಒಟ್ಟು 1,055 ಕೋಟಿ ರೂ. ಕೊರತೆಯಾಗಿದೆ. ಈ ಹಣದಲ್ಲಿ ಜನರಿಗೆ ಸಾಲ ನೀಡಬಹುದಿತ್ತು. ಕೊರತೆಯಾದ ಹಣವನ್ನು ಸಾಲವಾಗಿ ಮೈಕ್ರೋ ಫೈನಾನ್ಸ್ಗಳು ನೀಡುತ್ತಿವೆ ಎಂದರು.

ಪ್ರತಿ ಬಜೆಟ್ ನಲ್ಲೂ ಅನುದಾನ ಶೇ.20 ರಷ್ಟು ಹೆಚ್ಚಾಗಬೇಕು. 2022-23 ರಲ್ಲಿ ಬಿಜೆಪಿ ಸರಕಾರ ಕೃಷಿ ಇಲಾಖೆಗೆ 7,288 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರಕಾರ 5,035 ಕೋಟಿ ರೂ. ನೀಡಿದೆ. ಅಂದರೆ 2,253 ಕೋಟಿ ರೂ. ಕೊರತೆಯಾಗಿದೆ. ಇದು ರೈತರ ಬದುಕಿನ ಮೇಲೆ ಪರಿಣಾಮ ಬೀರಿದೆ. ತೋಟಗಾರಿಕಾ ಇಲಾಖೆಗೆ ಬಿಜೆಪಿ 1,374 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರಕಾರ 1,207 ಕೋಟಿ ರೂ. ನೀಡಿದೆ. ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಸಹಕಾರಿ ಎಲ್ಲ ಸೇರಿ ಬಿಜೆಪಿ 15,383 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 14,768 ಕೋಟಿ ರೂ. ನೀಡಿದೆ. ಇದರಿಂದ 614 ಕೋಟಿ ರೂ. ಕೊರತೆಯಾಗಿದೆ.

ಕಂದಾಯ ಇಲಾಖೆಗೆ ಬಿಜೆಪಿ 1534 ಕೋಟಿ ರೂ.ನೀಡಿದರೆ, ಕಾಂಗ್ರೆಸ್ನಿಂದ 940 ಕೋಟಿ ರೂ. ನೀಡಲಾಗಿದೆ. 594 ಕೋಟಿ ರೂ. ಕೊರತೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಬಿಜೆಪಿ 12,410 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ನಿಂದ 9,699 ಕೋಟಿ ರೂ. ನೀಡಲಾಗಿದೆ. 2,710 ಕೋಟಿ ರೂ. ಕೊರತೆಯಾಗಿದೆ. ನೀರಾವರಿಗೆ ಬಿಜೆಪಿ 19,610 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 16,834 ಕೋಟಿ ರೂ. ನೀಡಿದೆ. ಇದರಿಂದ 2755 ಕೋಟಿ ರೂ. ಕೊರತೆಯಾಗಿದೆ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ನ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಕಾಂಗ್ರೆಸ್ ಸರಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಬಡ ಜನರು ಸಾಲ ಮಾಡಿದರೆ ಮನೆ ಬಿಟ್ಟು ಹೊರಡಬೇಕಾಗಿದೆ. ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಸಾಲ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರಕಾರ ನಿಗಮಗಳ ಮೂಲಕ ಸಾಲ ನೀಡದೆ, ಜನರು ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್‌ಗಳ ಮೊರೆ ಹೋಗಿದ್ದಾರೆ ಎಂದು ದೂರಿದರು.

ಮೈಕ್ರೋ ಫೈನಾನ್ಸ್ನಲ್ಲಿ 10 ಜನರ ಗುಂಪು ರಚಿಸಿ, ಪ್ರತಿಯೊಬ್ಬರಿಗೂ 50 ಸಾವಿರ ರೂ. ಸಾಲ ನೀಡುತ್ತಾರೆ. ಒಬ್ಬರಿಗೆ ಉಳಿದವರು ಶೂರಿಟಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳು ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. 50 ಸಾವಿರ ರೂ. ಸಾಲ ಪಡೆದರೆ 67 ಸಾವಿರ ರೂ. ವಾಪಸ್ ನೀಡಬೇಕು. ಎರಡು ತಿಂಗಳು ಕಟ್ಟಲಿಲ್ಲವೆಂದರೆ ರೌಡಿಗಳು ಮನೆಗೆ ಹೋಗಿ ಗಲಾಟೆ ಮಾಡುತ್ತಾರೆ. ಅನೇಕ ಹಳ್ಳಿಗಳಲ್ಲಿ ಜನರು ಮನೆ ಬಿಟ್ಟು ವಲಸೆ ಹೋಗಿದ್ದಾರೆ ಎಂದರು.

ಕೋಟೆ ಲೂಟಿಯಾದ ನಂತರ ಬಾಗಿಲು ಹಾಕಿದರು ಎಂಬಂತೆ, ಸಿಎಂ ಸಿದ್ದರಾಮಯ್ಯ ಈಗ ಹೊಸ ಕಾನೂನು ತರಲು ಮುಂದಾಗಿದ್ದಾರೆ. ನೋಟಿಸ್ ಕೊಡದೆ ಜನರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಇಂತಹ ಸಮಯದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪೊಲೀಸರು ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಕಂಟ್ರೋಲ್ ರೂಮ್ ರೂಪಿಸಿದರೂ ಅದರಿಂದ ಜನರಿಗೆ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಸಾಲ ಮನ್ನಾ ಬಗ್ಗೆ ಹೇಳಿದ್ದರಿಂದ ಡಿಸಿಸಿ ಬ್ಯಾಂಕ್ಗಳಿಗೆ ನಷ್ಟವಾಗಿದೆ. ಸಾಲ ಪಡೆದವರು ಕಾಂಗ್ರೆಸ್ ಸರಕಾರವನ್ನು ನಂಬಿಕೊಂಡು ಕೂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳುತ್ತಾರೆಂದು ಪ್ರಧಾನಿ ಮೋದಿ ಹೇಳಿದ್ದು ಈಗ ನಿಜವಾಗಿದೆ. ಗೃಹಲಕ್ಷ್ಮಿಯ ಹಣ ಮಹಿಳೆಯರಿಗೆ ನಿಜವಾಗಿಯೂ ಸಿಕ್ಕಿದ್ದರೆ ಏಕೆ ಮೈಕ್ರೋ ಫೈನಾನ್ಸ್ಗೆ ಹೋಗುತ್ತಾರೆ ಎಂದು ಪ್ರಶ್ನೆ ಮಾಡಿದರು.

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲು ಕೇಂದ್ರ ಸರಕಾರ ಹಣ ಕೊಡಬೇಕಿದೆ. ಇದರ ಜೊತೆಗೆ ಬೆಂಗಳೂರಿಗೆ ಅನುದಾನ ನೀಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಈಗ ಮೈಕ್ರೋ ಫೈನಾನ್ಸ್ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಂತೆ. ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡುವುದಾದರೆ ಇಲ್ಲಿ ಕಾಂಗ್ರೆಸ್ ಏಕೆ ಅಧಿಕಾರದಲ್ಲಿದೆ? ಎಂದು ಪ್ರಶ್ನೆ ಮಾಡಿದರು.

ಏಕರೂಪ ನಾಗರಿಕ ಸಂಹಿತೆ :

ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲರೂ ಸಮಾನ ಎಂಬ ಭಾವನೆ ಬೆಳೆಯುತ್ತದೆ. ಬೇರೆ ದೇಶಗಳಲ್ಲಿ ಎಲ್ಲ ನಾಗರಿಕರು ಒಂದೇ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಭಾರತದಲ್ಲೂ ಹಿಂದೂಗಳಿಗೆ ಇರುವ ಕಾನೂನು ಎಲ್ಲ ಧರ್ಮೀಯರಿಗೆ ಅನ್ವಯವಾಗಬೇಕು ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News