ರಾಜಕೀಯ ಕ್ಷೇತ್ರ ಪವಿತ್ರವಾದದ್ದು: ಬಿ.ಟಿ.ಲಲಿತಾ ನಾಯಕ್
ಬೆಂಗಳೂರು : ರಾಜಕೀಯ ಕ್ಷೇತ್ರವು ಒಂದು ಪವಿತ್ರವಾದ ಸ್ಥಳ. ಅದರಿಂದ ಬಹಳಷ್ಟು ಜನರಿಗೆ ಶಾಪ ವಿಮೋಚನೆ ಮಾಡಬಹುದು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಸೋಷಿಯಲಿಸ್ಟ್ ಪಾರ್ಟಿ ಹಾಗೂ ಬಿ.ಟಿ.ಲಲಿತಾ ನಾಯಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಿಂದ ಬಡವರ ಕಣ್ಣೀರನ್ನು ಒರೆಸಬಹುದು ಹಾಗೂ ಹೀನಾಯ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಒಳ್ಳೆಯ ಸ್ಥಿತಿಗೆ ತರಬಹುದು ಎಂದು ಹೇಳಿದರು.
ರಾಜಕೀಯದಿಂದ ಆತ್ಮವಿಶ್ವಾಸ, ಘನತೆ ತಂದುಕೊಳ್ಳುವುದಕ್ಕೆ ಸಾಧ್ಯ. ಆದ್ದರಿಂದಲೇ ಡಾ.ಅಂಬೇಡ್ಕರ್ ಅವರು ರಾಜಕೀಯಕ್ಕೆ ಬರಬೇಕೆಂದು ಹೇಳುತ್ತಾರೆ. ಯಾವುದೇ ವ್ಯಕ್ತಿಗೆ ಶಿಕ್ಷಣ ಮತ್ತು ಸಂಘಟನೆ ಇರಬೇಕು. ಶಿಕ್ಷಣ ಇಲ್ಲದೇ ಏನು ಮಾಡುವುದಕ್ಕೆ ಆಗುವುದಿಲ್ಲ ಎನ್ನುವು ನಿಜ. ಆದರೆ, ಯಾರೆಲ್ಲಾ ಶಿಕ್ಷಣ ಪಡೆದುಕೊಂಡಿರುವರು ಇದ್ದಾರೋ, ಅವರೆಲ್ಲರೂ ಬಡವರನ್ನು ವಿಮೋಚನೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಮಾತ್ರ ದೇಶ ಉದ್ದಾರ ಆಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಬಿ.ಟಿ.ಲಲಿತಾ ನಾಯಕ್ ಸಲಹೆ ನೀಡಿದರು.
ಬಹಳಷ್ಟು ಅನಾಹುತಗಳಿಗೆ ಮೂಢನಂಬಿಕೆಯೇ ಕಾರಣ. ಆದ್ದರಿಂದ ನಾವು ರಾಜಕೀಯವನ್ನು ಒಂದು ಸಾಂಸ್ಕೃಂತಿಕ ಕೇಂದ್ರವಾಗಿ, ಸಾಹಿತಿಕ ಕೇಂದ್ರವಾಗಿ ಮಾಡಬಹುದು. ದೇಶದ ಮೊದಲ ಪ್ರಧಾನಿ ಜವಹಾರ್ಲಾಲ್ ನೆಹರೂ ಎಂದಿಗೂ ಮೂಢ ನಂಬಿಕೆಯನ್ನು ಪ್ರತಿಪಾದಿಸಿದವರಲ್ಲ, ಅವರ ಚಿಂತನೆ ವೈಜಾನಿಕವಾಗಿರುತ್ತಿತ್ತು ಎಂದು ಅವರು ತಿಳಿಸಿದರು.
ಯಾವುದೇ ರಾಜಕಾರಣಿ ಕೇವಲ ದೇವರು, ಭಾರತ ಮಾತೆ, ಕರ್ನಾಟಕ ಮಾತೆ ಎಂದುಕೊಂಡು ಭಾವನಾತ್ಮಕವಾಗಿ ಪೂಜೆ ಮಾಡಿಕೊಂಡಿದ್ದರೆ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ದೇಶದಲ್ಲಿರುವ ಬಡ ಜನರ ಬಗ್ಗೆ, ಸುತ್ತಮುತ್ತ ಇರುವ ಪರಿಸರವನ್ನು ಕಾಪಾಡಿಕೊಳ್ಳುವ ಪ್ರಜ್ಞೆ ರಾಜಕಾರಣಿಗಳಲ್ಲಿ ಇರಬೇಕು. ಅಂತಹದೇ ಪ್ರಜ್ಞೆ ನೆಹರೂ ಅವರಲ್ಲಿತ್ತು ಎಂದು ಬಿ.ಟಿ.ಲಲಿತಾ ನಾಯಕ್ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಪಿಐನ ಮುಖಂಡ ಎಂ.ಬಿ.ಮೈಕಲ್ ಫರ್ನಾಂಡಿಸ್, ಟ್ರಸ್ಟ್ನ ಸ್ಥಾಪಕಿ ಎಸ್ಎಲ್ ಉಮಾದೇವಿ, ಪ್ರೊ.ಹನುಮಂತ, ವಕೀಲ ಅನಂತ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.