ಚುನಾವಣಾ ಆಯೋಗದ ನಿಷ್ಕ್ರಿಯತೆ ವಿರುದ್ಧ ಅಂಚೆ ಪತ್ರ ಅಭಿಯಾನ
ಬೆಂಗಳೂರು : ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿರುದ್ಧದ ನಿಷ್ಕ್ರಿಯತೆಗಾಗಿ ಭಾರತೀಯ ಚುನಾವಣಾ ಆಯೋಗವನ್ನು ಹೊಣೆಯಾಗಿಸುವ ಅಭಿಯಾನವವನ್ನು ಪ್ರಜಾಸತ್ತಾತ್ಮಕ ಹಕ್ಕುಗಳ ಬಗ್ಗೆ ಕಾಳಜಿ ಹೊಂದಿರುವ ಹಲವಾರು ಸಂಘಟನೆಗಳು ಕೈಗೆತ್ತಿಕೊಂಡಿವೆ.
ಈ ಸಂಬಂಧ ಶನಿವಾರ ಬೆಂಗಳೂರು, ಅಹಮದಾಬಾದ್, ಮುಂಬೈ, ಹೈದರಾಬಾದ್ ಹಾಗೂ ಇನ್ನಿತರ ವಿವಿಧ ನಗರಗಳಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳಿಗೆ ಜಂಟಿ ದೂರು ಸಲ್ಲಿಸಲಾಗಿದ್ದು, ದಿಲ್ಲಿಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೂ ಪತ್ರವೊಂದನ್ನು ಸಲ್ಲಿಸಲಾಗಿದೆ. ಈ ಸಂಘಟನೆಗಳ ಗುಂಪು ಹಾಗೂ ಕಾಳಜಿ ಹೊಂದಿರುವ ನಾಗರಿಕರು ಅಂಚೆ ಪತ್ರ ಅಭಿಯಾನವನ್ನೂ ನಡೆಸುತ್ತಿದ್ದು, ವಿವಿಧ ನಗರಗಳಿಂದ ಬೆನ್ನುಮೂಳೆ ಚಿತ್ರ ಹೊಂದಿರುವ ನೂರಾರು ಅಂಚೆ ಪತ್ರಗಳನ್ನು ದಿಲ್ಲಿಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರಿಗೆ ರವಾನಿಸಲಿದ್ದಾರೆ. ಆ ಮೂಲಕ ಬೆನ್ನು ಮೂಳೆ ಬೆಳೆಸಿಕೊಳ್ಳಿ ಇಲ್ಲವೆ ರಾಜಿನಾಮೆ ನೀಡಿ ಎಂದು ಅವರನ್ನು ಆಗ್ರಹಿಸಲಿದ್ದಾರೆ.
ಈ ಸಂಘಟನೆಗಳು ಸಲ್ಲಿಸಿರುವ ಪತ್ರದಲ್ಲಿ ಮತದಾನ ಪ್ರಮಾಣದ ದತ್ತಾಂಶವನ್ನು ಶೇಕಡಾವಾರು ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಂಖ್ಯಾ ಪ್ರಮಾಣವನ್ನು ಒದಗಿಸಿಲ್ಲ. ಇದರಿಂದ ಮತ ಎಣಿಕೆಯನ್ನು ತಿರುಚುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಇದರೊಂದಿಗೆ, ಚುನಾವಣೆಯ ಸಂದರ್ಭದಲ್ಲಿ ದ್ವೇಷ ಭಾಷಣವನ್ನು ಹತ್ತಿಕ್ಕುವಲ್ಲಿನ ವೈಫಲ್ಯ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಮಾತ್ರ ಕ್ರಮ ಕೈಗೊಂಡು, ಆಡಳಿತಾರೂಢ ಪಕ್ಷಕ್ಕೆ ತೋರುತ್ತಿರುವ ವಿನಾಯಿತಿ, ಪರ್ಯಾಯ ಜಾಹಿರಾತುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯ, ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಿರುವ ಹಾಗೂ ಅಭ್ಯರ್ಥಿಗಳು ಎದುರಿಸುತ್ತಿರುವ ಬೆದರಿಕೆಯ ದೂರುಗಳನ್ನು ಪರಿಶೀಲಿಸುವಲ್ಲಿನ ವೈಫಲ್ಯದ ಕುರಿತೂ ಈ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಈ ಪತ್ರಕ್ಕೆ ಈ ಸಂಘಟನೆಗಳೊಂದಿಗೆ ವಕೀಲರು, ಹೋರಾಟಗಾರರು, ಚಿತ್ರ ನಿರ್ಮಾಪಕರು, ಶಿಕ್ಷಣ ತಜ್ಞರು ಹಾಗೂ ಕಾಳಜಿ ಹೊಂದಿರುವ ನಾಗರಿಕರು ಸೇರಿದಂತೆ ವಿವಿಧ ರಂಗದ 222 ವ್ಯಕ್ತಿಗಳು ಸಹಿ ಮಾಡಿದ್ದಾರೆ.
ಈ ರಾಷ್ಟ್ರಮಟ್ಟದ ಅಭಿಯಾನದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ನ್ಯಾಶನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ ಮೆಂಟ್ಸ್, ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್, ಶ್ರಮಿಕ್ ಮುಕ್ತಿ ದಳ್, ಯಂಗ್ ಲೀಡರ್ಸ್ ಆಫ್ ಆ್ಯಕ್ಟಿವ್ ಸಿಟಿಝನ್ ಶಿಪ್, ಭಾರತ್ ಬಚಾವೊ ಆಂದೋಲನ್, ಪ್ರಶಾಂತ್, ಹೇಟ್ ಸ್ಪೀಚ್ ಬೇಡ, ನ್ಯೂ ಟ್ರೇಡ್ ಯೂನಿಯನ್ ಇನಿಶಿಯೇಟಿವ್, ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರಸಿ, ಸಿಟಿಝನ್ಸ್ ಫಾರ್ ದಿ ಕಾನ್ಸ್ಟಿಟ್ಯೂಶನ್, ದಿ ಬಾಂಬೆ ಕ್ಯಾಥೊಲಿಕ್ ಸಭಾ, ಸೆಂಟರ್ ಫಾರ್ ಪ್ರೊಮೋಟಿಂಗ್ ಡೆಮಾಕ್ರಸಿ, ಪಾನಿಹಕ್ ಸಮಿತಿ, ನಾವೆದ್ದು ನಿಲ್ಲದಿದ್ದರೆ, ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಫ್ರೈಡೇಸ್ ಫಾರ್ ಫ್ಯೂಚರ್, ಡೆಲ್ಲಿ ಸಾಲಿಡಾರಿಟಿ ಗ್ರೂಪ್ ಹಾಗೂ ಎದ್ದೇಳು ಕರ್ನಾಟಕ ಸಂಘಟನೆಗಳು ಜಂಟಿಯಾಗಿ ಭಾಗಿಯಾಗಿವೆ.