ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಕಡಿತ : ರಾಜ್ಯ ಸರಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಆಕ್ರೋಶ
ಬೆಂಗಳೂರು : ಗಣೇಶ ಹಬ್ಬದ ವೇಳೆ ಕೇಂದ್ರ ಸರಕಾರ ರಾಜ್ಯದ ರೈತರಿಗೆ ಬೆಂಬಲ ಬೆಲೆಯ ಉಡುಗೊರೆ ಕೊಟ್ಟರೆ, ರಾಜ್ಯ ಸರಕಾರ ಹಾಲಿನ ಬೆಲೆ ಕಡಿತದ ಕೊಡುಗೆ ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬೆಲೆ ಕುಸಿತದ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುತ್ತಿದೆ. ಆದರೆ, ರಾಜ್ಯ ಸರಕಾರ ಹಾಲು ಉತ್ಪಾದಕರಿಗೆ ಈಗಿರುವ ಬೆಲೆಯನ್ನೂ ಕಡಿತಗೊಳಿಸಿ ಹಾಲು ಖರೀದಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸರಕಾರ, ರಾಜ್ಯದ ಹಾಲು ಉತ್ಪಾದಕರಿಗೆ ಕೊಡುವ ಬೆಲೆಯಲ್ಲಿ ಪ್ರತಿ ಲೀಟರ್ ಗೆ 1.50 ರೂ.ಗಳಿಂದ 2 ರೂ.ವರೆಗೂ ಕಡಿತಗೊಳಿಸುವ ಮೂಲಕ ಹೈನುಗಾರರ ಶ್ರಮಕ್ಕೆ ತಣ್ಣೀರೆರೆಚುವ ಕೆಲಸ ಮಾಡಿದೆ. ಅತಿವೃಷ್ಟಿಯಿಂದಾಗಿ ರಾಜ್ಯದ ರೈತರು ಬೆಳೆ ಹಾನಿಯಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಗೆ ಬೆಂಬಲ ಬೆಲೆ ಹೆಚ್ಚಿಸಿ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ರಾಜ್ಯ ಸರಕಾರದ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ಗರಿಷ್ಠ 30.50 ರೂ.ನೀಡಿ ಖರೀದಿ ಮಾಡುತ್ತಿದ್ದವು. ಆದರೀಗ 1.50 ರೂ. ಕಡಿತಗೊಳಿಸಿ ರೈತರಿಗೆ ಪ್ರತಿ ಲೀಟರ್ ಗೆ 28, 29 ರೂ.ನೀಡುತ್ತಿವೆ. ಕೆಲವೆಡೆ ಇದಕ್ಕೂ ಖೋತಾ ಆಗಿದೆ. ಇದು ಹೈನುಗಾರರ ದುರಂತ ಸ್ಥಿತಿ ಎಂದು ಅವರು ದೂರಿದ್ದಾರೆ.
ನಮ್ಮದು ರೈತಪರ ಸರಕಾರ, ಜನಪರ ಸರಕಾರ ಎನ್ನುವ ಕಾಂಗ್ರೆಸ್ ಸರಕಾರ ರೈತ ವಿರೋಧಿ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದೆ. ರಾಜ್ಯ ಸರಕಾರ ಕೂಡಲೇ ಬೆಲೆ ಕಡಿತದ ಆದೇಶ ಹಿಂಪಡೆಯಬೇಕು. ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.