ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತರ್‍ರಾಷ್ಟ್ರೀಯ ಮೆರುಗು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತರ್‍ರಾಷ್ಟ್ರೀಯ ಮೆರುಗು ನೀಡಲಾಗುವುದು. ಈ ವಿಮಾನ ನಿಲ್ದಾಣವನ್ನು 2.5 ಲಕ್ಷ ಪ್ರಯಾಣಿಕರ ನಿರೀಕ್ಷೆ ಇರಿಸಿಕೊಂಡು 270 ಕೋಟಿ ರೂ.ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ರವಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‍ನ ಹೊಸ ಕಟ್ಟಡ ಕಾಮಗಾರಿ ಪ್ರಗತಿ ವೀಕ್ಷಣೆ ನಡೆಸಿ, ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ಈಗ ವಾರ್ಷಿಕ 50 ಸಾವಿರ ಪ್ರಯಾಣಿಕರಿಗೆ ತಕ್ಕದಾಗಿ ಟರ್ಮಿನಲ್ ಇದೆ. ಇದನ್ನು 2.5 ಲಕ್ಷ ಪ್ರಯಾಣಿಕರಿಗೆ ತಕ್ಕಂತೆ, ಅಗತ್ಯ ಸೌಲಭ್ಯಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಬಹು ದೊಡ್ಡ ಪ್ರಮಾಣದಲ್ಲಿ ಹೊಸ ಟರ್ಮಿನಲ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈಗಾಗಲೇ ಕಾಮಗಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಪ್ರಹ್ಲಾದ್ ಜೋಶಿ ಹೇಳಿದರು.
10 ಏರ್ ಬಸ್ ನಿಲುಗಡೆಗೆ ವಿಸ್ತರಣೆ: ಸದ್ಯಕ್ಕೆ 4 ವಿಮಾನಗಳು ನಿಲ್ಲುವ ಸ್ಥಳವಿದ್ದು, ಅದನ್ನೀಗ ಸುಮಾರು 10 ಏರ್ ಬಸ್, ಬೋಯಿಂಗ್ ನಿಲ್ಲಿಸುವಷ್ಟು ಪ್ರದೇಶಕ್ಕೆ ವಿಸ್ತರಿಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
2024ರ ಮಾ.10ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ವೇಗವಾಗಿ ಸಾಗುತ್ತಿದೆ. ಈ ಹೊಸ ಟರ್ಮಿನಲ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತರ್ ರಾಷ್ಟ್ರೀಯ ಮೆರುಗು ನೀಡಲಿದೆ. ನಮ್ಮ ವಾಣಿಜ್ಯನಗರಿ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಮೇಲ್ದರ್ಜೆಯ ಸೌಲಭ್ಯಗಳು ಒದಗಲಿವೆ. ಇದರಿಂದ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಪಥ ವೇಗದಲ್ಲಿರುತ್ತದೆ ಎಂದು ಅವರು ಅಭಿಪ್ರಾಯಪ್ಟರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ಹಾಗೂ ವಿಮಾನ ನಿಲ್ದಾಣದ ಆಡಳಿತ ವರ್ಗದವರು ಉಪಸ್ಥಿತರಿದ್ದರು.