ದೇಶದಲ್ಲಿ 12 ಕೋಟಿಗೂ ಅಧಿಕ ಶೌಚಗೃಹ ನಿರ್ಮಾಣ : ಪ್ರಹ್ಲಾದ್ ಜೋಶಿ

Update: 2024-10-02 12:32 GMT

ಬೆಂಗಳೂರು : ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ನನಸು ಮಾಡಿದ್ದಾರೆ ಪ್ರಧಾನಿ ಮೋದಿ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಪಾದಿಸಿದರು.

ಬುಧವಾರ ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರಿನ ಯಶವಂತಪುರದ ಸಂವಿಧಾನ ವೃತ್ತದಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ಆಯೋಜಿಸಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಚ್ಛ ಭಾರತ ಪರಿಕಲ್ಪನೆ ಗಾಂಧಿಯವರ ಆಶಯವಾಗಿತ್ತು. ಅದರಂತೆ ಪ್ರಧಾನಿ ಮೋದಿ ಬಯಲು ಶೌಚ ಮುಕ್ತಿಗೊಳಿಸುವ ಮೂಲಕ ಅದನ್ನು ಸಾಕಾರಗೊಳಿಸಿದ್ದಾರೆ ಎಂದರು.

12 ಕೋಟಿ ಶೌಚಗೃಹ ನಿರ್ಮಾಣ: ದೇಶಾದ್ಯಂತ 12 ಕೋಟಿಗೂ ಅಧಿಕ ಶೌಚಗೃಹಗಳನ್ನು ನಿರ್ಮಿಸುವ ಮೂಲಕ ಮೋದಿ ಅವರು ಬಯಲು ಶೌಚ ನಿರ್ಮೂಲನೆಗೊಳಿಸಿ ಸ್ವಚ್ಛ ಭಾರತ್‍ಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ ಅರಿವು ಮೂಡಿಸಿದ್ದಾರೆ ಎಂದು ಜೋಶಿ ಹೇಳಿದರು.

ದೇಶವಾಸಿಗಳನ್ನು ಸ್ವಚ್ಛ ಭಾರತದ ರಾಯಭಾರಿಗಳನ್ನಾಗಿ ಮಾಡಿ ದೇಶದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದಾರೆ ಪ್ರಧಾನಿ ಮೋದಿ ಅವರು ಎಂದು ಸ್ಮರಿಸಿದರು. ಇದೇ ವೇಳೆ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿಗೆ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ರವಿಕುಮಾರ್, ಬೆಂಗಳೂರು ಉತ್ತರ ವಿಭಾಗದ ಬಿಜೆಪಿ ಅಧ್ಯಕ್ಷ ಹರೀಶ್ ಹಾಗೂ ಎಸ್‍ಸಿ ಮೋರ್ಚಾದ ಮುಖಂಡರು, ಪ್ರಮುಖರು, ಕಾರ್ಯಕರ್ತರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News