ದೇಶವು ಸಂತೋಷವಾಗಿಲ್ಲ, ಸರ್ವಾಧಿಕಾರ ಮಾತ್ರವಲ್ಲ ಆರದ ಗಾಯಗಳಿವೆ : ನಟ ಪ್ರಕಾಶ್ ರಾಜ್
ಬೆಂಗಳೂರು: ‘ಹೃದಯವಂತ ಮನುಷ್ಯನ ಊಹೆಗೂ ನಿಲುಕದಂತ ಕ್ರೌರ್ಯವು ಮಲಯಾಳಂನ ಲೇಖಕಿ ಕೆ.ಆರ್.ಮೀರಾ ರಚಿಸಿದ ‘ಭಗವಂತನ ಸಾವು’ ಕೃತಿಯಲ್ಲಿದೆ. ಕೃತಿಯಲ್ಲಿನ ಎಲ್ಲ ಕತೆಗಳನ್ನು ನಾನು ಓದಿದ್ದು, ಕತೆಗಳು ಪ್ರಸಕ್ತ ಸನ್ನೀವೇಶಕ್ಕೆ ತಕ್ಕಂತಿವೆ’ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ ಬಹುರೂಪಿ ಹಾಗೂ ಡಾ.ಎಂ.ಎಂ. ಕಲಬರ್ಗಿ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಮಲಯಾಳಂನ ಲೇಖಕಿ ಕೆ.ಆರ್.ಮೀರಾ ಬರೆದಿರುವ ಹಾಗೂ ವಿಕ್ರಂ ಕಾಂತಿಕೆರೆ ಅವರು ಕನ್ನಡಕ್ಕೆ ಅನುವಾದಿಸಿರುವ ‘ಭಗವಂತನ ಸಾವು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶವು ಸಂತೋಷವಾಗಿಲ್ಲ. ಸರ್ವಾಧಿಕಾರ ಮಾತ್ರವಲ್ಲ, ಆರದ ಗಾಯಗಳಿವೆ. ನಮ್ಮ ಚರ್ಮದ ಮೇಲೆ ಅಷ್ಟೇ ಅಲ್ಲ, ನಮ್ಮ ಮನಸಿನ ಮೇಲೂ ಆಳವಾದ ಗಾಯಗಳಿವೆ. ನಮಗೆ ನಾವೇ ಮಾಡಿಕೊಂಡ ಗಾಯಗಳಿವೆ, ನಮ್ಮನ್ನು ಗಾಸಿಗೊಳಿಸಿ, ಗಾಯ ಮಾಡಿರುವ ಬಗ್ಗೆ ಮಾತನಾಡಲು ಆಗದಂತಹ ಅಸಹಾಯಕ ನೋವು ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಕೃತಿ ಅತ್ಯಂತ ಪ್ರಸ್ತುತವಾದ ಕೃತಿ ಎಂದು ಅವರು ಬಣ್ಣಿಸಿದರು.
ಸಂಶೋಧಕ ಎಂ.ಎಂ.ಕಲ್ಬುರ್ಗಿ ಇರಬಹುದು, ಪತ್ರಕರ್ತೆ ಗೌರಿ ಲಂಕೇಶ್ ಇರಬಹುದು, ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಇರಬಹುದು, ಜೈಲಿನಲ್ಲಿರುವ ಬಹಳಷ್ಟು ಮುಂದಿಯ ಕಥೆಗಳನ್ನು ನಾವು ಓದಿದರೆ ಅಥವಾ ನೆನನಪಾದರೆ ನಾವು ಬದುಕುತ್ತಿರುವ ಕಾಲ ಯಾವುದು ಎಂಬುವುದು ನಮಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ನಂಬಲಾಗದಂತಹ ಜೀರ್ಣಿಸಿಕೊಳ್ಳಲಾಗದ ಕೌರ್ಯವನ್ನು ನಾವು ನೋಡುತ್ತಿದ್ದೇವೆ. ಕೃತಿಯಲ್ಲಿನ ಕತೆಗಳೆಲ್ಲವೂ ಕಾಲ್ಪನಿಕವಾಗಿದ್ದು, ಬದುಕಿರುವ ಅಥವಾ ಕಾಲವಾಗಿರುವ ಯಾವುದಾದರೂ ವ್ಯಕ್ತಿಯ ಜೊತೆಗೆ ಇಲ್ಲಿನ ಪಾತ್ರಗಳು ಹೋಲುತ್ತವೆ ಎಂದಾದರೆ ಅದಕ್ಕೆ ನಾವು ಬದುಕುತ್ತಿರುವ ಕಾಲವೇ ಕಾರಣವಾಗಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.
ಕೃತಿಯಲ್ಲಿ ಸಂತೈಸಲು ಬಂದವರಿಂದಲೇ ಕೊಲೆಯಾಗುವ ಕಥೆ ಇದೆ. ಗೌರಿ, ಕಲ್ಬುರ್ಗಿ, ಸ್ಟಾನ್‍ಸ್ವಾಮಿ ಇವರ್ಯಾರು ಸತ್ತಿಲ್ಲ, ಇವರ ಯೋಚನೆ, ಸ್ಫೂರ್ತಿ ಇವರನ್ನು ಸಾಯುವಂತೆ ಮಾಡುವುದಿಲ್ಲ. ಇಂತವರನ್ನು ಕೊಂದರೆ ಇವರ ಬಳಗದ ಮತ್ತೊಂದು ಧ್ವನಿ ದೊಡ್ಡದಾಗಿ ಬೆಳೆಯುತ್ತದೆ. ಒಂದು ದ್ವನಿ ಅಡಗಿಸಲು ಪ್ರಯತ್ನ ಮಾಡಿದರೆ ಮತ್ತೊಂದು ದ್ವನಿ ದೊಡ್ಡದಾಗಿ ಹುಟ್ಟಿ ಕೊಳ್ಳುತ್ತದೆ. ಸತ್ತವರ ಮುಂದೆ ನಾವು ಬದುಕಿದ್ದೇವೆ ಎಂದರು.
ಇವತ್ತು ನ್ಯಾಯಮೂರ್ತಿಗಳು ತೀರ್ಪು ಕೊಡುವ ಮುನ್ನ ಭಗವಂತನ ಮುಂದೆ ಹೋಗುತ್ತಿದ್ದಾರಂತೆ, ಅವರು ಭಗವಂತನ ಮಾತು ಕೊಳ್ಳತ್ತಾರಾ? ಇಲ್ಲವೇ, ಭಗವಾನ್ ಮಾತು ಕೇಳುತ್ತಾರ ಗೊತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಪ್ರಗತಿಪರ ಚಿಂತಕರಾದ ಸಿದ್ದನಗೌಡ ಪಾಟೀಲ ಮಾತನಾಡಿ, ಕೌರ್ಯವನ್ನು ಶೌರ್ಯ ಎಂದು ಬಿಂಬಿಸುವ ಕಾಲದಲ್ಲಿ ನಾವಿದ್ದೇವೆ. ಗೌರಿ ಸೇರಿ ಕಲಬುರಗಿಯನ್ನು ಕೊಂದವರನ್ನು ಶೂರರು ಎಂದು ಕರೆಯಲಾಗುತ್ತಿದೆ. ಇಂತಹ ಮತಾಂಧತೆಯು ದೇಶದಲ್ಲಿ ಸ್ಪೂರ್ತಿ ಪಡೆದುಕೊಳ್ಳುತ್ತಿದೆ. ಹೀಗಾಗಿ ಸತ್ಯ ಹೇಳಲು ಹೆದರುತ್ತಿದ್ದಾರೆ ಎಂದರು.
ಕೃತಿಯಲ್ಲಿ ವ್ಯವಸ್ಥೆಯ ವಿರೋಧದ ಚಿಂತನೆಗಳು ಇವೆ. ನಮ್ಮ ಬರಹಗಾರರು ಪ್ರಸ್ತುತ ಸಂಘರ್ಷಗಳನ್ನು ಬರೆಯಬೇಕಾಗಿದೆ. ಮತೀಯರನ್ನು ಮತಾಂಧರಾಗಿ ಬದಲಾವಣೆ ಮಾಡುತ್ತಿದ್ದಾರೆ. ಧಾರ್ಮಿಕ ಸರ್ವಾಧಿಕಾರ, ಆರ್ಥಿಕ ಸರ್ವಾಧಿಕಾರ ಮತ್ತು ಭಾಷಾ ಸಾರ್ವಧಿಕಾರ ದೇಶದ ಜನರ ಮೇಲೆ ದಾಳಿ ಮಾಡುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಾಹಿತಿಗಳು ಕೆಲಸ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಲೇಖಕಿ ಕೆ.ಆರ್. ಮೀರಾ, ವಿಕ್ರಂ ಕಾಂತಿಕೆರೆ, ಶ್ರೀವಿಜಯ ಕಲ್ಬುರ್ಗಿ ಸೇರಿದಂತೆ ಮತ್ತಿತರರು ಇದ್ದರು.