ಕಲಾಸೇವೆ ಬಿಟ್ಟು ಪ್ರಕಾಶ್ ರಾಜ್ ದಾರಿ ತಪ್ಪಿದ್ದಾರೆ : ಜೆಡಿಎಸ್

Update: 2024-04-16 16:35 GMT

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಹುಭಾಷಾ ನಟ, ಚಿಂತಕ ಪ್ರಕಾಶ್ ರಾಜ್ ದಾರಿ ತಪ್ಪಿದ್ದಾರೆ. ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ ಎಂದು ಜೆಡಿಎಸ್ ಕಟುಕಿದೆ.

ಮಂಗಳವಾರ ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, ಪ್ರಕಾಶ್‍ರಾಜ್ ದಾರಿ ತಪ್ಪಿರುವುದಕ್ಕೆ ಸಾಕ್ಷ್ಯವಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? ಎಂದು ಪ್ರಶ್ನಿಸಿದೆ.

ಅಲ್ಲದೆ, ಮೊರಾರ್ಜಿ ವಸತಿ ಶಾಲೆಗಳಷ್ಟೆ ಅಲ್ಲ, ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೆಯ ಆಹಾರವಿಲ್ಲ, ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಆದರೆ, ಈಚೆಗಷ್ಟೇ ನೀವು ಸ್ಥಾಪಿಸಿದ ನಿರ್ದಿಗಂತಕ್ಕೆ ಹಣದ ಹೊಳೆ ಸರಕಾರ ಹರಿಸುತ್ತಿದೆ ಎಂದಿದೆ.

ಮತ್ತೊಂದೆಡೆ, ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿಫ್ರಂಟ್ ಎಂಬ ಮಟ್ಟು-ಪಟ್ಟಿನ ಕಂಪೆನಿಗೆ ಕೋಟಿ ಕೋಟಿ ಸುರಿದಿರುವ ಕಾಂಗ್ರೆಸ್ ಸರಕಾರ, ನಿಮ್ಮ ನಿರ್ದಿಗಂತಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯುವವರು ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವುವರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ ಹೇಗೆ? ಎಂದು ಜೆಡಿಎಸ್ ಪ್ರಕಾಶ್ ರಾಜ್ ಅವರನ್ನು ಪ್ರಶ್ನಿಸಿದೆ.

ಇನ್ನೂ, ಇತ್ತೀಚಿಗೆ ಮಂಡ್ಯದ ಮಗ ಯಾರು, ಕಳ್ಳನನ್ನ ಮಗ ಯಾರು ಎಂದು ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನರು ನಿರ್ಧರಿಸುತ್ತಾರೆ ಎಂಬ ಪ್ರಕಾಶ್ ರೈ ಹೇಳಿಕೆ ನಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News