ವಕ್ಫ್ ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಕ್ಕೆ ಸೂಚಿಸಿ ಕೇಂದ್ರ ಸಚಿವರಿಗೆ ಆರ್. ಅಶೋಕ್ ಪತ್ರ

Update: 2024-11-04 14:00 GMT

ಆರ್. ಅಶೋಕ್

ಬೆಂಗಳೂರು : ಕರ್ನಾಟಕದ ವಕ್ಫ್ ಮಂಡಳಿಗೆ ಸಂಬಂಧಿಸಿದ ಎಲ್ಲ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕೆಂದು ಕೋರಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಿಗೆ ಹಾಗೂ ವಕ್ಫ್ ಜಂಟಿ ಸಮಿತಿಗೆ ಪತ್ರ ಬರೆದಿದ್ದಾರೆ.

ಸೋಮವಾರ ಈ ಕುರಿತು ಮಾಹಿತಿ ನೀಡಿದ ಆರ್.ಅಶೋಕ್, ರೈತರ ಜಮೀನು ಹಾಗೂ ಹಿಂದೂ ಸಂಸ್ಥೆಗಳಿಗೆ ಸಂಬಂಧಿಸಿದ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿದ್ದು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

‘ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ ತರಲು ಜಂಟಿ ಸಂಸದೀಯ ಸಮಿತಿ ರಚಿಸಿದ್ದು, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರಲು ಶ್ರಮಿಸುತ್ತಿದೆ. ಆದರೆ, ರಾಜ್ಯ ಸರಕಾರ ಮತ್ತು ವಕ್ಫ್ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಬಡ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರ್.ಅಶೋಕ್ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ 15ಸಾವಿರ ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ಎಲ್ಲ ಜಿಲ್ಲೆಗಳಲ್ಲಿ ತಲಾ 10ಸಾವಿರ ಎಕರೆ ಜಮೀನನ್ನು ವಕ್ಫ್ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಅಲ್ಲದೆ, ವಕ್ಫ್ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ತನ್ನದು ಎಂದು ಹೇಳಿಕೊಂಡಿದೆ.

ಹಿಂದೂ ಸ್ಮಶಾನ ತನ್ನದು ಎಂದು ವಕ್ಫ್ ಉಲ್ಲೇಖಿಸಿರುವುದು ಇನ್ನಷ್ಟು ಆಘಾತದ ಸಂಗತಿ. 13ನೇ ಶತಮಾನದಷ್ಟು ಇತಿಹಾಸ ಹೊಂದಿರುವ ವಿರಕ್ತ ಮಠಕ್ಕೆ ಸೇರಿದ ಸಿಂಧಗಿಯ 1.28 ಎಕರೆ ಜಮೀನು, ವಿಜಯಪುರದ ಐತಿಹಾಸಿಕ ಸೋಮೇಶ್ವರ ದೇವಾಲಯ, ಕಲಬುರಗಿಯ ಬೀರದೇವರ ಗುಡಿ ಸೇರಿದಂತೆ ಅನೇಕ ಜನಪ್ರಿಯ ಸ್ಥಳಗಳನ್ನು ವಕ್ಫ್ ತನ್ನದೆಂದು ಘೋಷಿಸಿಕೊಂಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದು ಜನರಲ್ಲಿ ಆತಂಕ ಉಂಟುಮಾಡಿದ್ದು, ಹಾವೇರಿಯಲ್ಲಿ ಹಿಂಸಾಚಾರ, ಗಲಭೆ ನಡೆದಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ, ಜಂಟಿ ಸಮಿತಿಯು ಕೂಡಲೇ ಸರಕಾರದ ಮುಖ್ಯ ಕಾರ್ಯದರ್ಶಿಯ ಜೊತೆ ಮಾತನಾಡಬೇಕು ಹಾಗೂ ವಕ್ಫ್ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಬೇಕು ಎಂದು ಆರ್.ಅಶೋಕ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News