ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಸಂಚು!

Update: 2024-04-07 16:37 GMT

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಕ್ಕೆ ನಗರದ ಪರಪ್ಪನ ಅಗ್ರಹಾರದಲ್ಲೇ ಕುಳಿತು ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ಅಧಿಕಾರಿಗಳು ಬಹಿರಂಗ ಪಡಿಸಿರುವುದಾಗಿ ವರದಿಯಾಗಿದೆ.

ಈ ಪ್ರಕರಣದ ಮತ್ತೋರ್ವ ಆರೋಪಿ ಶಿವಮೊಗ್ಗದ ಪ್ರಾಯೋಗಿಕ ಸ್ಫೋಟ ಪ್ರಕರಣ ಹಾಗೂ ಮಂಗಳೂರು ಗೋಡೆ ಬರಹ ಪ್ರಕರಣದ ಶಂಕಿತ ಮಾಝ್ ಮುನೀರ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಮತ್ತು ಮಂಗಳೂರು ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಝ್ ಮುನೀರ್ ಈಗಾಗಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ಇತ್ತೀಚೆಗೆ ಎನ್‍ಐಎದಿಂದ ಬಂಧನಕ್ಕೊಳಗಾಗಿರುವ ಚಿಕ್ಕಮಗಳೂರಿನ ಮುಝಮ್ಮಿಲ್  ಶರೀಫ್‍ನ ಹೇಳಿಕೆ ಆಧರಿಸಿ ಆತನನ್ನು ಬಾಡಿ ವಾರೆಂಟ್ ಪಡೆದು ಬಂಧಿಸಲಾಗಿದೆ. ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೊಮ್ಮೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿ ದೇಶದ 18 ಕಡೆಗಳಲ್ಲಿ ಮಾ.5ರಂದು ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆಯೇ ಮಾಝ್ ಮುನೀರ್ ನನ್ನು 8 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು ಎನ್ನಲಾಗಿದೆ.

ವಿಚಾರಣೆ ವೇಳೆ ಆರೋಪಿ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣದ ಜಾಡುಹಿಡಿದ ಎನ್‍ಐಎ ಅಧಿಕಾರಿಗಳು ಚಿಕ್ಕಮಗಳೂರಿನ ಮುಝಮ್ಮಿಲ್ ಶರೀಫ್‍ನನ್ನು ಬಂಧಿಸಿದ್ದರು. ಮುಝಮ್ಮಿಲ್ ಶರೀಫ್ ವಿಚಾರಣೆಯಲ್ಲಿ ಮಾಝ್ ಮುನೀರ್ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮಾಝ್ ಮುನೀರ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದುಕೊಂಡಿದ್ದ. ಬಳಿಕ ಶಿವಮೊಗ್ಗದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ.

ಮಾಝ್ ಮುನೀರ್ ಹಾಗೂ ಅಬ್ದುಲ್ ಮತೀನ್ ತಾಹಾ ಐಇಡಿ ತಯಾರಿಕೆಯಲ್ಲಿ ಪರಿಣಿತರಾಗಿದ್ದು, ಇತರೆ ಆರೋಪಿಗಳಿಗೆ ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ. ಅದೇ ಮಾದರಿಯಲ್ಲಿ ಕೆಫೆ ಸ್ಫೋಟದ ಆರೋಪಿ ಮುಸಾವೀರ್ ಹುಸೇನ್ ಶಾಜೀಬ್‍ಗೂ ತರಬೇತಿ ನೀಡಿದ್ದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News