ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ

Update: 2024-03-07 13:26 GMT

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಅವರನ್ನು ತೀವ್ರ ನಿಗಾ ಘಟಕ (ಐಸಿಯು)ದಿಂದ ವಿಶೇಷ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ ಎಂದು ಬ್ರೂಕ್‍ಫೀಲ್ಡ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರದೀಪ್‍ಕುಮಾರ್ ಟಿ.ಜೆ. ತಿಳಿಸಿದ್ದಾರೆ.

ಗುರುವಾರ ಈ ಕುರಿತು ಮಾಹಿತಿ ನೀಡಿರುವ ಅವರು, ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ 10 ಮಂದಿಯ ಪೈಕಿ 46 ವರ್ಷದ ಸ್ವರ್ಣಾಂಭ ಎಂಬ ಮಹಿಳೆಗೆ ಶೇ.40ರಷ್ಟು ಸುಟ್ಟಗಾಯಗಳಾಗಿತ್ತು. ಐದು ದಿನಗಳಿಂದ ಐಸಿಯುನಲ್ಲಿದ್ದರು. ಮಹಿಳೆಗೆ ಆದ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ದೀಪಾಂಶು(23) ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ, ಮತ್ತು ಕೆಫೆಯ ಸಿಬ್ಬಂದಿಗಳಲ್ಲೊಬ್ಬರಾದ ಫಾರೂಖ್ ಹುಸೇನ್(19) ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಡಾ.ಪ್ರದೀಪ್ ಕುಮಾರ್ ಟಿ.ಜೆ. ತಿಳಿಸಿದ್ದಾರೆ.

ಗಾಯಾಳು ಸ್ವರ್ಣಾಂಭ ಅವರ ಪತಿ ಶ್ಯಾಮ್‍ಸುಂದರ್ ಪ್ರತಿಕ್ರಿಯಿಸಿ, ಸ್ಫೋಟದ ಶಬ್ಧದ ತೀವ್ರತೆಯಿಂದಾಗಿ ಪತ್ನಿ ಸ್ವರ್ಣಾಂಭ ತೀವ್ರ ಆಘಾತಕ್ಕೊಳಗಾಗಿದ್ದರು. ಆಕೆಗೆ ಘಟನೆಯನ್ನು ಸ್ಮರಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ವಿಶೇಷ ವಾರ್ಡಿನಲ್ಲಿ ಚಿಕಿತ್ಸೆ ನಡೆಯುತ್ತಿದೆ. ವೈದ್ಯರು ಡಿಸ್ಚಾರ್ಜ್ ದಿನಾಂಕವನ್ನು ಇನ್ನೂ ತಿಳಿಸಿಲ್ಲ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News