ರೇಣುಕಾಸ್ವಾಮಿ ಕೊಲೆ | ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಪೊಲೀಸರು ಸೂಕ್ತ ತನಿಖೆ ನಡೆಸಬೇಕು : ಆರ್.ಅಶೋಕ್‌

Update: 2024-06-13 11:15 GMT
  • Photo: (PTI)

ಬೆಂಗಳೂರು : ಚಿತ್ರನಟ ದರ್ಶನ್‌ ಪೊಲೀಸರಿಗೆ ದೂರು ನೀಡಿ ರೇಣುಕಾಸ್ವಾಮಿಗೆ ತಿಳಿ ಹೇಳಿಸಬಹುದಿತ್ತು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಕೊಂದಿದ್ದರೆ ಅದು ದೊಡ್ಡ ತಪ್ಪು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼರಾಜ್ಯದಲ್ಲಿ ಅಪರಾಧಿ ಚಟುವಟಿಕೆ ಹೆಚ್ಚಿದೆ. ಚನ್ನಗಿರಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಾಕಲಾಗಿದೆ. ಪೊಲೀಸರಿಗೆ ಕಪಾಳ ಮೋಕ್ಷವಾಗಿದೆ. ಕಾನೂನು ಪೊಲೀಸರ ಹಿಡಿತದಲ್ಲೇ ಇಲ್ಲ. ಆದ್ದರಿಂದ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿ ಮುಚ್ಚುಮರೆ ಮಾಡುತ್ತಿದ್ದಾರೆ. ನಾವು ಕರ್ನಾಟಕದಲ್ಲಿದ್ದೇವೆಯೇ ಹೊರತು ಜಮ್ಮು ಕಾಶ್ಮೀರದಲ್ಲಿಲ್ಲ. ಇದನ್ನು ಟಿವಿ ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ಕ್ರಮ ವಹಿಸುವುದು ಸರಿಯಲ್ಲʼ ಎಂದರು.

ʼತನಿಖೆ ಸರಿಯಾಗಿ ನಡೆದು ಸತ್ಯಾಂಶ ಹೊರಬರಲಿ. ಈ ಪ್ರಕರಣದಲ್ಲಿ ಮೃತನಾದ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆ ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಸಂದೇಶಗಳು ಬರುತ್ತವೆ. ಅದಕ್ಕಾಗಿ ಕೊಲೆ ಮಾಡಲು ಹೋಗಬಾರದು. ಇಂತಹ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವುದು ಇಡೀ ಚಿತ್ರೋದ್ಯಮಕ್ಕೆ ಕಳಂಕವಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕುʼ ಎಂದರು.

ವಿದ್ಯಾರ್ಥಿಗಳನ್ನು ಗೊಂದಲದಲ್ಲಿಟ್ಟಿದೆ:

ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಕೊಡದೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಗೊಂದಲದಲ್ಲಿಟ್ಟಿದೆ. ಸರ್ಕಾರಿ ಶಾಲೆಗೆ ಮಕ್ಕಳು ಬರುವುದೇ ಕಡಿಮೆಯಾಗಿರುವಾಗ ಇಂತಹ ಸಮಸ್ಯೆ ಉಂಟಾಗಿದೆ. ಒಂದು ಕಡೆ ಗ್ಯಾರಂಟಿಗಳನ್ನು ನೀಡಿ, ಮತ್ತೊಂದು ಕಡೆ ಪುಸ್ತಕಗಳನ್ನು ನೀಡಿಲ್ಲ. ಸರ್ಕಾರಿ ಖಜಾನೆ ಖಾಲಿಯಾಗಿದ್ದು, ಕಸಕ್ಕೂ ತೆರಿಗೆ ಹಾಕಲು ಮುಂದಾಗಿದ್ದಾರೆ. ಕರ್ನಾಟಕ ಮಾಡಲ್‌ ಯಾವುದು ಎಂದು ತಿಳಿಯಲು ಆರ್ಥಿಕ ಇಲಾಖೆಯ ಒಂದು ವರ್ಷದ ಪ್ರಗತಿ ಕಾರ್ಡ್‌ ಬಿಡುಗಡೆಗೊಳಿಸಲಿ ಎಂದು ಆಗ್ರಹಿಸಿದರು.

ಬರ ಪರಿಹಾರ ನೀಡಿಲ್ಲ :

ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ಅಜ್ಞಾನ ಪ್ರದರ್ಶನ ಮಾಡುತ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಆರ್‌.ಅಶೋಕ್ ದೂರಿದರು.

ರೈತರಿಗೆ ತಲುಪಬೇಕಾದ ಪರಿಹಾರದ ಹಣ ಇನ್ನೂ ತಲುಪಿಲ್ಲ ಎಂದು ಸ್ವತಃ ಕಾಂಗ್ರೆಸ್‌ ಶಾಸಕರೇ ಪತ್ರ ಬರೆದು ರಾಜ್ಯ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ನೀಡಿದೆ. ಅದನ್ನು ರೈತರಿಗೆ ವಿತರಣೆ ಮಾಡಿ ಎಂದರೂ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ಆಗುತ್ತಿಲ್ಲ. ಬರ ಪರಿಹಾರ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ಕೊಡಲಿ, ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದು ಬೇಡ ಎಂದು ಆರ್‌.ಅಶೋಕ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News