ರೇಣುಕಾಸ್ವಾಮಿ ಕೊಲೆ ಪ್ರಕರಣ | ಪವಿತ್ರಾ ಗೌಡ ಮನೆಯಲ್ಲಿ ಮಹಜರು ; ಚಪ್ಪಲಿ, ಬಟ್ಟೆ ವಶಕ್ಕೆ
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಮನೆಯಲ್ಲಿ ರವಿವಾರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾ ಗೌಡ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ಅಲ್ಲದೇ, ರೇಣುಕಾಸ್ವಾಮಿಯ ಮೇಲೆ ಮೊದಲು ಹಲ್ಲೆ ಮಾಡಿದ್ದೇ ಪವಿತ್ರಾ ಗೌಡ ಎಂಬ ಮಾಹಿತಿಯೂ ತನಿಖಾಧಿಕಾರಿಗಳಿಗೆ ಲಭ್ಯವಾಗಿರುವುದಾಗಿ ತಿಳಿದುಬಂದಿದೆ.
ಆರ್.ಆರ್.ನಗರದಲ್ಲಿರುವ ಪವಿತ್ರಾ ಗೌಡ ಮನೆಗೆ ಆಕೆ ಮತ್ತು ಅವರ ಆಪ್ತ ಪವನ್ ಎಂಬವರನ್ನು ಕರೆದೊಯ್ಯಲಾಗಿದ್ದು, ಕೃತ್ಯದ ದಿನ ಪವಿತ್ರಾ ಧರಿಸಿದ್ದ ಬಟ್ಟೆ ಹಾಗೂ ಪವಿತ್ರಾ ಗೌಡ ಹಲ್ಲೆ ಮಾಡಲು ಬಳಸಿದ್ದರು ಎನ್ನಲಾಗಿರುವ ಚಪ್ಪಲಿಯನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪವಿತ್ರಾಗೌಡ ಮ್ಯಾನೇಜರ್ ವಶಕ್ಕೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಎ1 ಆರೋಪಿ ಪವಿತ್ರಾಗೌಡ ಅವರ ಮ್ಯಾನೇಜರ್ ಆಗಿರುವ ದೇವರಾಜ್ ಎಂಬಾತನನ್ನು ಪೊಲೀಸರು ನಗರದ ಮೈಸೂರು ರಸ್ತೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆಯಾದ ಶೆಡ್‍ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ದೇವರಾಜ್‍ನನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಿರೀಶ್ ನಾಯ್ಕ್ ಮರು ಸೇರ್ಪಡೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ತಂಡಕ್ಕೆ ಪೊಲೀಸ್ ಇನ್‍ಸ್ಪೆಕ್ಟರ್ ಗಿರೀಶ್ ನಾಯ್ಕ್ ಮರು ಸೇರ್ಪಡೆಯಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಇವರು ವರ್ಗಾವಣೆಯಾಗಿದ್ದರು. ನಂತರ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಮೈಸೂರಿನಲ್ಲಿ ನಟ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳ ಬಂಧನದ ಸಂದರ್ಭದಲ್ಲಿ ತನಿಖಾ ತಂಡದಲ್ಲಿದ್ದ ಗಿರೀಶ್ ನಾಯ್ಕ್ ಅವರನ್ನು ಪುನಃ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿತ್ತು.
ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರನ್ನು ನಿಯೋಜಿಸಲಾಗಿತ್ತು. ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಗಿರೀಶ್ ನಾಯ್ಕ್ ಅವರನ್ನು ಪ್ರಕರಣದಲ್ಲಿ ಸಹಾಯಕ ತನಿಖಾಧಿಕಾರಿಯಾಗಿ ಮತ್ತೊಮ್ಮೆ ತಂಡಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.