ರೇಣುಕಾಸ್ವಾಮಿ ಕೊಲೆ ಪ್ರಕರಣ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗತಿಯಲ್ಲಿ ನಡೆಸುತ್ತಿರುವ ಪೊಲೀಸರು, ಹತ್ಯೆಗೆ ಸಹಕರಿಸಿದ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಮೃತದೇಹ ಸಾಗಿಸಿದ್ದ ಸ್ಕಾರ್ಪಿಯೋ ಕಾರಿನ ಮಾಲಕ ಪುನೀತ್ ಸೇರಿ ಐವರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈ ಮೂಲಕ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 18ಕ್ಕೆ ಏರಿದೆ.
ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಕಾರಿನಲ್ಲಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಪಡಿಸಿರುವ ಆರೋಪದಡಿ ಹೇಮಂತ್ ಹಾಗೂ ಅಪಹರಣ ಮತ್ತು ಹಲ್ಲೆ ಮಾಡುವಾಗ ಸಹಕರಿಸಿದ ಆರೋಪದಡಿ ರವಿ ಎಂಬಾತನನ್ನು ಬಂಧಿಸಲಾಗಿದೆ. ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ಜಗದೀಶ್ ಹಾಗೂ ಅನುಕುಮಾರ್ ಎಂಬವರನ್ನು ಚಿತ್ರದುರ್ಗದಲ್ಲಿ ಬಂಧಿಸಿ ನಗರಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿಯನ್ನು ಹತ್ಯೆ ಮಾಡುತ್ತಾರೆಂದು ಗೊತ್ತಿರಲಿಲ್ಲ. ಮೇಕೆ ತರಲು ಕಾರು ಪಡೆದಿದ್ದರು ಎಂದು ಗುರುವಾರ ಸುದ್ದಿಮಾಧ್ಯಮಗಳ ಮುಂದೆ ಸ್ಕಾರ್ಪಿಯೋ ಮಾಲಕ ಪುನೀತ್ ಹೇಳಿಕೆ ನೀಡಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿರುವ ಸಾಕ್ಷ್ಯಾಧಾರ ಲಭ್ಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಹತ್ಯೆಗೂ ಮುನ್ನ ಪಾರ್ಟಿ?, ರೆಸ್ಟೋರೆಂಟ್ ಸೀಜ್: ‘ಆರ್.ಆರ್.ನಗರದಲ್ಲಿರುವ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ಹೆಸರಿನ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಪೊಲೀಸರು ದಾಳಿ ನಡೆಸಿ ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಆ ಬಾರ್ ಅನ್ನು ಸೀಜ್ ಮಾಡಿರುವುದಾಗಿ ತಿಳಿದುಬಂದಿದೆ.
ಹತ್ಯೆಗೂ ಮುನ್ನ ಇದೇ ರೆಸ್ಟೋರೆಂಟ್‍ನಲ್ಲಿ ದರ್ಶನ್ ತಂಡದ ಸದಸ್ಯರು ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು ಎನ್ನಲಾದ ಆರೋಪದಡಿ ಶುಕ್ರವಾರ ಇನ್‍ಸ್ಪೆಕ್ಟರ್ ಸುಬ್ರಮಣ್ಯ ನೇತೃತ್ವದ ತಂಡ ವಿನಯ್‍ನನ್ನು ಕರೆದುಕೊಂಡು ಹೋಗಿ ಸಿಸಿಟಿವಿಯ ಡಿವಿಆರ್ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.