ನಿರ್ಮಲಾ ಸೀತಾರಾಮನ್ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ : ಎಸ್.ಮನೋಹರ್

Update: 2024-10-14 16:28 GMT

ಬೆಂಗಳೂರು : ಕೇಂದ್ರದ ಬಿಜೆಪಿ ಸರಕಾರ ರಾಜ್ಯಕ್ಕೆ ತೆರಿಗೆ ಪಾಲನ್ನು ನೀಡುವುದರಲ್ಲಿ ವಿಫಲವಾಗಿರುವುದನ್ನು ವಿರೋಧಿಸಿ ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸೋಮವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಕೇಂದ್ರ ಸರಕಾರ ರಾಜ್ಯದಿಂದ ಜಿಎಸ್‍ಟಿ ಹಾಗೂ ಇತರೆ ತೆರಿಗೆ ಮೂಲಕ ಪಡೆಯುವ ಹಣದಲ್ಲಿ ರಾಜ್ಯಕ್ಕೆ ನೀಡುವ ಪಾಲನ್ನು ಕಡಿಮೆಗೊಳಿಸಿರುವ ಕೇಂದ್ರ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರಕಾರ ಕಡಿಮೆ ಪಾಲನ್ನು ನೀಡುತ್ತಿರುವುದು ರಾಜ್ಯ ಸರಕಾರದ ವಿರುದ್ಧ ಮಾಡುತ್ತಿರುವ ಸೇಡಿನ ರಾಜಕೀಯ. ಪ್ರಸ್ತುತ ಸಾಲಿನಲ್ಲಿ 6,498ಕೋಟಿ ರೂ.ತೆರಿಗೆ ಪಾಲನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ತೆರಿಗೆ ಸಂಗ್ರಹದಲ್ಲಿ ವೈಫಲ್ಯವಿದ್ದರೂ, ಆ ರಾಜ್ಯಕ್ಕೆ ಹೆಚ್ಚಿನ ಪಾಲನ್ನು ನೀಡಿ ಕರ್ನಾಟಕಕ್ಕೆ ದ್ರೋಹ ಬಗೆಯುತ್ತಿರುವುದು ಪ್ರಧಾನಿ ಮೋದಿ ಹಾಗೂ ನಿರ್ಮಲ ಸೀತಾರಾಮನ್ ರಾಜ್ಯಕ್ಕೆ ಹಾಗೂ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ ಎಂದು ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನಕ್ಕೆ ಶರಣಾಗಿದ್ದಾರೆ ಹಾಗೂ ನಾಲ್ಕು ಜನ ಕೇಂದ್ರ ಮಂತ್ರಿಗಳು ಮೋದಿಯ ಮುಂದೆ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲನ್ನ ಕೇಳಲು ವಿಫಲರಾಗಿದ್ದಾರೆ. ಇವರು ಕೇವಲ ಅಧಿಕಾರಕ್ಕೋಸ್ಕರ ಸೀಮಿತರಾಗಿದ್ದಾರೆಯೇ ಹೊರತು ರಾಜ್ಯದ ಹಿತಕ್ಕಲ್ಲ ಎಂಬುದು ಈಗ ಬಹಿರಂಗವಾಗಿದೆ. ಪ್ರತಿವರ್ಷವೂ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಸೂಕ್ತ ರೀತಿಯಲ್ಲಿ ಹಂಚುವ ಪ್ರಯತ್ನವನ್ನು ಮೋದಿ ಸರಕಾರ ಮಾಡಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದಿಂದ ಆಯ್ಕೆಯಾಗಿಗಿ, ಕೇಂದ್ರ ಮಂತ್ರಿ ಆಗಿರುವ ನಿರ್ಮಲ ಸೀತಾರಾಮನ್ ಉದ್ದೇಶಪೂರ್ವಕವಾಗಿ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೊಲಗಬೇಕು. ಮೋದಿ ಕೂಡಲೆ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಮತ್ತು ಸೂಕ್ತ ರೀತಿಯಲ್ಲಿ ರಾಜ್ಯದ ಪಾಲನ್ನು ನೀಡಬೇಕು ಎಂದು ಮನೋಹರ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಎ.ಸಲೀಂ, ಪ್ರಕಾಶ್, ಹೇಮರಾಜ್, ಪುಟ್ಟರಾಜು, ಚಂದ್ರಶೇಖರ, ಉಮೇಶ್, ಓಬಳೇಶ್, ಚಿನ್ನಿ ಪ್ರಕಾಶ್, ನವೀನ್ ಸಾಯಿ, ಕುಶಾಲ್ ಹರುವೇಗೌಡ, ಸುಂಕದಕಟ್ಟೆ ನವೀನ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News