ನಾಳೆ(ಅ.15) ಲೋಕಾರ್ಪಣೆಯಾಗಲಿರುವ ಕಾವೇರಿ ಐದನೆ ಹಂತದ ಯೋಜನೆ

Update: 2024-10-14 16:57 GMT

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಐದನೆ ಹಂತದ ಯೋಜನೆ ನಾಳೆ (ಅ.16) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ಸುಮಾರು 4,336 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾವೇರಿ ಐದನೆ ಹಂತದ ಕುಡಿಯುವ ನೀರಿನ ಯೋಜನೆಗೆ ಜಪಾನಿನ ಸಂಸ್ಥೆ ಜೈಕಾದಿಂದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲಾಗಿದೆ. ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಜಲಮಂಡಳಿಯ ವಿವಿಧ ಆದಾಯ ಮೂಲಗಳಿಂದ ಆ ಸಾಲವನ್ನು ತೀರಿಸಲಾಗುವುದು.

ದಿನವೊಂದಕ್ಕೆ ಬೆಂಗಳೂರಿನ ಜನತೆ 2,600 ಮಿಲಿಯನ್ ಲೀಟರ್ ನೀರನ್ನು ಬಳಸುತ್ತಾರೆ. ಅದರಲ್ಲಿ 1450 ಎಂಎಲ್‍ಡಿ ನೀರು ಕಾವೇರಿ ನದಿಯಿಂದ ಪೂರೈಕೆಯಾದರೆ ಉಳಿಕೆ 650 ಎಂಎಲ್‍ಡಿ ನೀರು ಅಂತರ್ಜಲದಿಂದ ಪೂರೈಕೆಯಾಗುತ್ತದೆ. ಆದರೂ ಬೆಂಗಳೂರಿಗೆ ಪೂರೈಸಲು 500 ಎಂಎಲ್‍ಡಿಗಳಷ್ಟು ನೀರಿನ ಕೊರತೆ ಇದೆ.

ಬೆಂಗಳೂರು ಜಲಮಂಡಳಿ ಅನೇಕ ಜಲಸಂರಕ್ಷಣಾ ಕಾರ್ಯ ಹಾಗೂ ಸಮರ್ಪಕ ನೀರಿನ ಪೂರೈಕೆಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಳತ್ವದಲ್ಲಿ, ‘ಮನೆಮನೆಗೂ ಕಾವೇರಿ ನೀರು-ಇದು ಸಮೃದ್ಧ ಬೆಂಗಳೂರು’ ಎಂಬ ಧ್ಯೇಯದಡಿ ಅನುಷ್ಠಾನಗೊಳ್ಳುತ್ತಿರುವ, ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಜಲ ಸಂಪರ್ಕ ಯೋಜನೆ ಬಹಳ ಮುಖ್ಯವಾಗಿದೆ. ಇದರಿಂದ 110 ಹಳ್ಳಿಗಳ ಜಲಕ್ಷಾಮ ನೀಗಲಿದೆ. 4 ಲಕ್ಷ ನೀರಿನ ಸಂಪರ್ಕ, 50 ಲಕ್ಷ ಜನರಿಗೆ ಕಾವೇರಿ ನೀರನ್ನು ಪೂರೈಸಲಿರುವ ಈ ಮಹತ್ವಾಕಾಂಕ್ಷಿ ಯೋಜನೆ ಇತಿಹಾಸ ಸೃಷ್ಟಿಸಲಿದೆ.

2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಗ್ರಾಮಗಳ ಅಭ್ಯುದಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಯಕಲ್ಪ ದೊರೆತಿದೆ. ದೇಶದಲ್ಲೇ ಅತ್ಯಾಧುನಿಕ ಹಾಗೂ ಬೃಹತ್ ನೀರಿನ ಸಂಸ್ಕರಣಾ ಘಟಕ ಮಂಡ್ಯದ ಮಳವಳ್ಳಿಯ ತೊರೆಕಾಡನಹಳ್ಳಿಯಲ್ಲಿ ನಿರ್ಮಾಣವಾಗಿದೆ. ನೆಟ್ಟಕಲ್ ಸಮತೋಲನ ಅಣೆಕಟ್ಟಿನಿಂದ ನೀರೆತ್ತಿ, ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ), ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‍ಗಳ ಮೂಲಕ ಒಟ್ಟು 775 ಎಂಎಲ್‍ಡಿ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುತ್ತದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ(ಟಿಕೆ ಹಳ್ಳಿ)ಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ನಡೆಯುವ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಜೈಕಾ ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೇಕುಚಿ ಟಕುರೋ, ಕೌನ್ಸಲ್ ಜನರಲ್ ಆಫ್ ಜಪಾನ್ ಇನ್ ಇಂಡಿಯಾದ ಟ್ಸುಟೋಮು, ಭಾರತದಲ್ಲಿ ಜಪಾನ್ ರಾಯಭಾರ ಕಚೇರಿಯ ಆರ್ಥಿಕ ಸಚಿವರಾದ ಹೊಕುಗೋ ಕ್ಯೋಕು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕೇಂದ್ರ, ರಾಜ್ಯ ಸಚಿವರು ಹಾಗೂ ಸಂಸದರು ಮತ್ತು ಶಾಸಕರು ಹಾಗೂ ಇನ್ನೀತರ ಎಲ್ಲ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

‘ಕಾವೇರಿ ಐದನೇ ಹಂತದ ಯೋಜನೆಯಿಂದ ಯಶವಂತಪುರ ವಿಧಾನಸಭಾ ಕ್ಷೇತ್ರದ 13 ಹಳ್ಳಿ, ದಾಸರಹಳ್ಳಿ ಕ್ಷೇತ್ರದ 6 ಹಳ್ಳಿ, ಬ್ಯಾಟರಾಯನಪುರ ಕ್ಷೇತ್ರದ 26 ಹಳ್ಳಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 32 ಹಳ್ಳಿ, ಮಹದೇವಪುರ ಕ್ಷೇತ್ರದ 33 ಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಹಾಗೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ನೀರಿನ ಸಂಪರ್ಕ ಸಿಗಲಿದ್ದು, ಮನೆ ಮನೆಗೂ ಕಾವೇರಿ ನೀರು ಸರಬರಾಜು ಆಗಲಿದೆ’

……………………..

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News