ಕನಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಲಾದ ಸಂಪುಟ ದರ್ಜೆಯ ಸ್ಥಾನ ಹಿಂಪಡೆಯಲು ಸಿಎಂ ಸಿದ್ದರಾಮಯ್ಯರಿಗೆ ಸಿಪಿಎಂ ಪತ್ರ

Update: 2024-11-22 15:51 GMT

ಸಿದ್ದರಾಮಯ್ಯ

ಬೆಂಗಳೂರು : ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಲಾಗಿರುವ ಸಂಪುಟದ ದರ್ಜೆಯ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಅದನ್ನು ಹಿಂಪಡೆಯಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ-ಮಾಕ್ಸ್ವಾದಿ(ಸಿಪಿಎಂ) ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

ಕಸಾಪ ಅಧ್ಯಕ್ಷ ಸ್ಥಾನ ಇರುವುದು ಸಾಹಿತ್ಯ ಪರಿಚಾರಿಕೆ ಮಾಡಲೇ ಹೊರತು ಅಧಿಕಾರ ಚಲಾವಣೆಗಲ್ಲ. ಈ ಹಿಂದಿನ ಸರಕಾರ ರಾಜಕೀಯ ಕಾರಣಗಳಿಗಾಗಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ದಯಪಾಲಿಸಿದೆ. ಇದನ್ನು ಕೂಡಲೇ ಹಿಂಪಡೆದು ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.

ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು ತಮ್ಮ ಸ್ಥಾನದ ಘನತೆಯನ್ನು ಮರೆತು, ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಿರಿಯ ಸಾಹಿತಿಗಳು, ಜಿಲ್ಲಾಡಳಿತ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಸೇರಿದಂತೆ ಎಲ್ಲರ ಮೇಲೂ ಅಧಿಕಾರ ಚಲಾಯಿಸುವ, ಅಹಂಕಾರ ಮೆರೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಮುಜುಗರ ಪಡುವಂತಾಗಿದೆ ಎಂದು ಸಿಪಿಐಎಂ ಅಸಮಾಧಾನ ವ್ಯಕ್ತಪಡಿಸಿದೆ.

ಜೋಶಿಯವರು ತಮ್ಮ ಜಾತಿ ಶ್ರೇಷ್ಠತೆ ಮತ್ತು ಅಧಿಕಾರದ ಅಹಂನಿಂದ ಎಲ್ಲರನ್ನೂ ದೂರ ತಳ್ಳುವ, ಕನ್ನಡವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅಧ್ಯಕ್ಷರಿಗೆ ನೀಡಿರುವ ಸಂಪುಟ ದರ್ಜೆಯ ಸ್ಥಾನಮಾನ ತೆಗೆದು ಪರಿಷತ್ತಿನ ಅಧ್ಯಕ್ಷರ ನೈಜ ಜವಾಬ್ದಾರಿ ಏನು ಎನ್ನುವುದನ್ನು ಜೋಶಿಯವರು ಅರಿತು ಮುನ್ನಡೆಯುವಂತೆ ಮಾಡಬೇಕು ಎಂದು ಸಿಪಿಐಎಂ ಪತ್ರದಲ್ಲಿ ತಿಳಿಸಿದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಸಿಪಿಐಎಂನ ಮಂಡ್ಯ ಜಿಲ್ಲಾ ಸಮಿತಿಯ ಟಿ.ಎಲ್ ಕೃಷ್ಣೇಗೌಡ, ಎಂ.ಪುಟ್ಟಮಾದು, ದೇವಿ, ಟಿ.ಯಶವಂತ, ಸಿ.ಕುಮಾರಿ, ಎನ್.ಎಲ್. ಭರತ್ ರಾಜ್ ಸಹಿ ಹಾಕಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News