ಯಶವಂತಪುರ ಮಾರುಕಟ್ಟೆ ದಾಸನಪುರಕ್ಕೆ ಸ್ಥಳಾಂತರ : ಸಚಿವ ಶಿವಾನಂದ ಪಾಟೀಲ್

Update: 2025-03-18 22:39 IST
ಯಶವಂತಪುರ ಮಾರುಕಟ್ಟೆ ದಾಸನಪುರಕ್ಕೆ ಸ್ಥಳಾಂತರ : ಸಚಿವ ಶಿವಾನಂದ ಪಾಟೀಲ್

 ಶಿವಾನಂದ ಪಾಟೀಲ್

  • whatsapp icon

ಬೆಂಗಳೂರು : ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಾಲ್ಕು ಉತ್ಪನ್ನಗಳ ವಹಿವಾಟನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿಯನ್ನು ಯಶವಂತಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದಿಂದ ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದರು.

ನಾಲ್ಕು ಉತ್ಪನ್ನಗಳನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಿರುವ ಸರಕಾರದ ಕ್ರಮವನ್ನು ಕೆಲವು ವರ್ತಕರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ನ್ಯಾಯಾಲಯ ಸರಕಾರದ ಆದೇಶವನ್ನು ಎತ್ತಿಹಿಡಿದಿದ್ದು, ಸರಕಾರ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿ ವರ್ತಕರಿಗೆ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆ ಹಂಚಿಕೆ ಮಾಡಲಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.

ಯಶವಂತಪುರ ಎಪಿಎಂಸಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಣ ಹಾಗೂ ರೈತರ ಹಿತದೃಷ್ಟಿಯಿಂದ ದಾಸನಪುರದಲ್ಲಿ 67.25 ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ 306 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗಿದೆ ಎಂದು ಶಿವಾನಂದ ಪಾಟೀಲ್ ಹೇಳಿದರು.

ಎಪಿಎಂಸಿಗಳನ್ನು ಹೊರತುಪಡಿಸಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಾಯ್ದೆ ಅಡಿ ವಿವಿಧ ಅವಕಾಶ ಕಲ್ಪಿಸಿ 4 ಖಾಸಗಿ ಮಾರುಕಟ್ಟೆ ಹಾಗೂ 65 ನೇರ ಖರೀದಿ ಕೇಂದ್ರಗಳನ್ನು ನಡೆಸಲು ಲೈಸೆನ್ಸ್ ನೀಡಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News