65 ಸಕ್ಕರೆ ಕಾರ್ಖಾನೆಗಳಿಂದ 3,101ಕೋಟಿ ರೂ. ಕಬ್ಬಿನ ಪಾವತಿ ಬಾಕಿ : ಸಚಿವ ಶಿವಾನಂದ ಪಾಟೀಲ್

ಶಿವಾನಂದ ಪಾಟೀಲ್
ಬೆಂಗಳೂರು : ರಾಜ್ಯದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ 65 ಸಕ್ಕರೆ ಕಾರ್ಖಾನೆಗಳು 3,101 ಕೋಟಿ ರೂ. ಗಳು ಪಾವತಿ ಮಾಡುವುದು ಬಾಕಿ ಇದೆ. ಶೀಘ್ರ ಹಣ ಪಾವತಿಸುವಂತೆ 33 ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು. ರಾಜ್ಯದಲ್ಲಿ ಒಟ್ಟು 99 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಪೈಕಿ 79 ಕಾರ್ಖಾನೆಗಳು ಪ್ರಸ್ತುತ ಕಾರ್ಯನಿರತವಾಗಿವೆ ಎಂದರು.
2024-25ನೇ ಹಂಗಾಮಿನಲ್ಲಿ 2025ರ ಫೆ.28ರ ಅಂತ್ಯಕ್ಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ 17,596.92 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಬೇಕಿದ್ದು, ಅವುಗಳಲ್ಲಿ 14,655 ಕೋಟಿ ರೂ. ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.
2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಚಾಲ್ತಿಯಲ್ಲಿದ್ದು, ಕಬ್ಬು ಬಿಲ್ಲು ಪಾವತಿಸಲು ಅವಕಾಶವಿರುತ್ತದೆ. ಆದಾಗ್ಯೂ, 2024-25ನೇ ಹಂಗಾಮಿನಲ್ಲಿ ಕಬ್ಬು ಬಿಲ್ಲು ಉಳಿಸಿಕೊಂಡಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಇದೇ ಜನವರಿ 16 ಮತ್ತು ಫೆ.4 ರಂದು ಶಾಸನಬದ್ದ ನೋಟಿಸುಗಳನ್ನು ಜಾರಿಗೊಳಿಸಲಾಗಿದೆ ಎಂದು ಶಿವಾನಂದ ಪಾಟೀಲ್ ವಿವರಿಸಿದರು.
ಕಬ್ಬು (ನಿಯಂತ್ರಣ) ಆದೇಶ 1966ರ ಖಂಡ (3ಸಿ) ಅನ್ವಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳ ಒಳಗಾಗಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಬಿಲ್ಲನ್ನು ಪಾವತಿಸಬೇಕಿದೆ. ನಿಗದಿತ ಅವಧಿಯಲ್ಲಿ ಕಬ್ಬಿನ ಬಿಲ್ಲನ್ನು ಪಾವತಿ ಮಾಡದೇ ಇದ್ದಲ್ಲಿ ಕಬ್ಬು (ನಿಯಂತ್ರಣ) ಆದೇಶ 1966ರ ಖಂಡ (3ಸಿ) ರನ್ವಯ 14 ದಿನಗಳ ನಂತರ ತಡವಾಗಿ ಪಾವತಿಸಿದ ದಿನಗಳಿಗೆ ಶೇ.15ರಷ್ಟು ಬಡ್ಡಿಯನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾಗಿರುತ್ತದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.