ಅತಿಯಾದ ಹಿಂದುತ್ವ ಧೋರಣೆಯಿಂದ ಜಾನಪದ ಸಂಪ್ರದಾಯ ನಾಶ: ಡಾ.ಪುರುಷೋತ್ತಮ ಬಿಳಿಮಲೆ

Update: 2024-11-22 18:24 GMT

ಬೆಂಗಳೂರು : ಅತಿಯಾದ ಹಿಂದುತ್ವ ಧೋರಣೆಯಿಂದ ಜಾನಪದ ಸಂಪ್ರದಾಯ ನಶಿಸಿಹೋಗುತ್ತಿದ್ದು, ಜಾನಪದದ ಮೂಲ ಅಂಶಗಳನ್ನು ಉಳಿಸುವ ಅವಶ್ಯಕತೆಯಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ `ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದಲ್ಲಿಯೂ ಬುಡಕಟ್ಟು ದೇವರುಗಳ ಬದಲಾಗಿ ರಾಮನ ಫೋಟೋಗಳು ರಾರಾಜಿಸುತ್ತಿವೆ ಎಂದರು.

ಕಿನ್ನರಿ ಜೋಗಿ ಸಂಪ್ರದಾಯವು ಭಕ್ತಿ ಪರಂಪರೆಗೆ ಸೇರದೆ ಗುರು ಪರಂಪರೆಗೆ ಸೇರಿದೆ. ಇದು ಕಲಾವಿದನ ಅಂತರಂಗದಿಂದ ಬಂದ ಹಾಡುಗಳಾಗಿವೆ. ಇದರಲ್ಲಿ ಹಾಡುಗಾರನ ಅನುಭವವು ಬೆರೆತುಕೊಂಡಿದ್ದು, ಹಾಡಿನ ಮೂಲಕ ಭಾವನೆಯನ್ನು ವ್ಯಕ್ತಪಡಿಸಲು ಸಹಾಯಕವಾಗಿದೆ. ಇದು ಜೋಗಿ ಸಮುದಾಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಜಾನಪದ ಹಾಡುಗಳು, ಕತೆಗಳಿಗೆ ಡಿಜಿಟಲ್ ಸ್ಪರ್ಶ ನೀಡುವ ಅನಿವಾರ್ಯತೆ ಹೆಚ್ಚಾಗಿದೆ. ಇಲ್ಲವಾದಲ್ಲಿ ಕಾಲಕ್ರಮೇಣ ಲಭ್ಯವಿರುವ ಅವಶೇಷಗಳು ನಶಿಸಿಹೋಗುತ್ತದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ ನೀಡಿದ್ದಾರೆ.

ಲೇಖಕ ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ನಮ್ಮಲ್ಲಿ ಎಷ್ಟೊಂದು ಲೋಕಗಳಿವೆ. ಆ ಎಲ್ಲ ಲೋಕಗಳ ತಾಯಿಬೇರು ಜಾನಪದ ಲೋಕವಾಗಿದೆ. ಹಾಗೆಯೇ ಎಲ್ಲ ಸಾಹಿತ್ಯಕ್ಕೂ ಜಾನಪದ ಸಾಹಿತ್ಯವೇ ಮೂಲವಾಗಿದೆ. ಜಾನಪದ ಕಲಾವಿದರು ರಾಜ್ಯದೆಲ್ಲೆಡೆ ಸಂಚರಿಸಿ ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಜಾನಪದ ಕತೆಗಳಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದರಿಂದ ಪ್ರತಿಯೊಬ್ಬರ ಜ್ಞಾನದ ಮಟ್ಟ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಆರಂಭವಾದ ಜಾನಪದ ವಿಶ್ವವಿದ್ಯಾಲಯ ವಿಶ್ವಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.

ಎಚ್.ಎಲ್.ನಾಗೇಗೌಡ ದೊಡ್ಡ ಅಧಿಕಾರಿಯಾಗಿದ್ದರೂ, ತನ್ನ ಅಧಿಕಾರವನ್ನು ಪಕ್ಕದಲ್ಲಿಟ್ಟು, ತನ್ನ ತಿಳುವಳಿಕೆಯ ಸಮಸ್ತವನ್ನೂ ಜಾನಪದ ಅಧ್ಯಯನಕ್ಕೆಂದು ಮೀಸಲಿಟ್ಟ ವ್ಯಕ್ತಿಯಾಗಿದ್ದರು. ಕರ್ನಾಟಕದ ಉದ್ದಗಲಕ್ಕೂ ಸಂಚಾರಿಸಿ, ಅನೇಕ ಗೀತೆಗಳನ್ನು ದಾಖಲಿಸಿ ಒಂದು ಲೋಕವನ್ನೇ ಸೃಷ್ಟಿಸಿದರು ಎಂದರು.

ಪ್ರಶಸ್ತಿ ಪುರಸ್ಕೃತ ಕಿನ್ನರಿ ಜೋಗಿ ಕಲಾವಿದ ಗುಡ್ಡಪ್ಪ ಜೋಗಿ ಮಾತನಾಡಿ, ಜಾನಪದ ಸಂಗೀತದ ದಾಟಿಯು ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತದೆ. ಜತೆಗೆ ಮೂಲ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರು ಬೇರೆ ಬೇರೆ ರೀತಿಯಾಗಿ ಹಾಡುತ್ತಾರೆ ಎಂದರು.

ಜಾನಪದ ಪರಿಷತ್‍ನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಈ ಬಾರಿಯ ಪ್ರಶಸ್ತಿಯನ್ನು ಅರ್ಜುನ ಜೋಗಿಯನ್ನು ಪ್ರಧಾನವಾಗಿಟ್ಟುಕೊಂಡು ಕತೆ ಹೇಳುವ ಜೋಗಿ ಸಮುದಾಯದ ಕಲಾವಿದನಿಗೆ ನೀಡಲಾಗಿದೆ. ಹಾಡಿನ ಮೂಲಕ ಕತೆಯನ್ನು ಕಟ್ಟಿಕೊಡುವವರು ಇವರು, ಗುಡ್ಡಗಾಡು ಪ್ರದೇಶಗಳಲ್ಲಿ ಮಾಧ್ಯಮದಂತೆ ಕಾರ್ಯನಿರ್ವಹಿಸುತ್ತಿದ್ದರು. ಸಂಗೀತ, ನೃತ್ಯ, ಕತೆ ಮೂರನ್ನು ಒಳಗೊಂಡ ಈ ಜಾನಪದ ಕಲೆ ಅತ್ಯಂತ ಶ್ರೀಮಂತವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ಗುಡ್ಡಪ್ಪ ಜೋಗಿ ಅವರಿಗೆ ನೀಡಲಾಯಿತು. ಪ್ರದಾನ ಪರಿಷತ್‍ನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News