ಕ್ರೀಡಾ ಮಕ್ಕಳ ಪ್ರೋತ್ಸಾಹಕ್ಕೆ ಕೃಪಾಂಕ | ಸಕಾರಾತ್ಮಕವಾಗಿ ಪರಿಶೀಲಿಸಿ ನಿರ್ಧಾರ : ಸಿದ್ದರಾಮಯ್ಯ ಭರವಸೆ
ಬೆಂಗಳೂರು : ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳ ಪ್ರೋತ್ಸಾಹಕ್ಕೆ ಕೃಪಾಂಕ ನೀಡುವ ಸಂಬಂಧದ ಬೇಡಿಕೆಯ ಬಗ್ಗೆ ಸರಕಾರ ಸಕಾರಾತ್ಮಕವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಗುರುವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಮಿನಿ ಒಲಂಪಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳ ಪ್ರೋತ್ಸಾಹಕ್ಕೆ ಕೃಪಾಂಕ ನೀಡಬೇಕೆಂದು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಇಟ್ಟಿರುವ ಬೇಡಿಕೆ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ತಾರತಮ್ಯ ಹೋಗಲಾಡಿಸಲು ಸಾಧ್ಯ :
ಮಕ್ಕಳು ಕ್ರೀಡಾ ಮನೋಭಾವ ರೂಡಿಸಿಕೊಂಡರೆ ಮನುಷ್ಯ ಸೃಷ್ಟಿಯ ಮೇಲು-ಕೀಳಿನ ತಾರತಮ್ಯ ಹೋಗಲಾಡಿಸಲು ಸಾಧ್ಯ. ಕ್ರೀಡೆಗೆ ಯಾವುದೇ ರೀತಿಯ ಜಾತಿ, ಧರ್ಮದ ಗಡಿ ಮತ್ತು ಮಿತಿಗಳಿಲ್ಲ. ಕ್ರೀಡಾಪಟು ಎಲ್ಲ ತಾರತಮ್ಯಗಳನ್ನು ಮೀರಿರುತ್ತಾನೆ ಎಂದು ಸಿದ್ದರಾಮಯ್ಯ ನುಡಿದರು.
ಕ್ರೀಡೆಗಳಲ್ಲಿ, ಒಲಂಪಿಕ್ಸ್‌ನಲ್ಲಿ ಭಾಗವಹಿಸುವುದೇ ಪ್ರಶಸ್ತಿ. ಹೀಗಾಗಿ ಒಲಂಪಿಕ್‌ನಲ್ಲಿ ಪ್ರಶಸ್ತಿ ಪಡೆಯುವುದೇ ಮುಖ್ಯ ಅಲ್ಲ. ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಮುಖ್ಯ. ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪಂದ್ಯಾವಳಿಗಳು ಆಯೋಜನೆಗೊಳ್ಳುತ್ತವೆ. ಕ್ರೀಡಾಪಟು ಆಗುವವರಿಗೆ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯ ಎಂದು ಅವರು ತಿಳಿಸಿದರು.
ಸರಕಾರ ಮತ್ತು ಕ್ರೀಡಾ ಸಂಸ್ಥೆಗಳು ಅವಕಾಶಗಳನ್ನು ಕಲ್ಪಿಸಬೇಕು. ಶಿಕ್ಷಣ ಮತ್ತು ಕ್ರೀಡೆ ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಅತ್ಯಂತ ಅಗತ್ಯ. ಶಿಸ್ತು ಇಲ್ಲದ ಕ್ರೀಡಾಪಟುವನ್ನು ಕಾಣಲು ಸಾಧ್ಯವಿಲ್ಲ. ಶಿಸ್ತು , ಪರಿಶ್ರಮ ಇಲ್ಲದವರು ಉತ್ತಮ ಕ್ರೀಡಾಪಟು ಆಗಲು ಸಾಧ್ಯವಿಲ್ಲ. ಕ್ರೀಡೆ ಜೊತೆಗೆ ಓದು, ಶಿಕ್ಷಣವು ಅಷ್ಟೇ ಮುಖ್ಯ ಎಂದ ಅವರು, ಕ್ರೀಡೆಯಲ್ಲಿ ಸಾಧಿಸುವವರಿಗೆ ಹಲವು ಸವಲತ್ತು ಮತ್ತು ಬದುಕಿನ ಅವಕಾಶಗಳನ್ನು ಕಲ್ಪಿಸುತ್ತಿದೆ.
ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವವರಿಗೆ 6 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ. ಕೊಡುತ್ತಿದ್ದೇವೆ. ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವವರಿಗೆ ಪೊಲೀಸ್ ಇಲಾಖೆಯಲ್ಲಿ ಶೇ.3 ಮತ್ತು ಇತರೆ ಇಲಾಖೆಯಲ್ಲಿ ಶೇ.2ರಷ್ಟು ಉದ್ಯೋಗ ಮೀಸಲಿಟ್ಟಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಿಝ್ವಾನ್ ಅರ್ಶದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಒಲಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ಅಂಜು ಬಾಬಿ ಜಾರ್ಜ್, ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.