ಕನ್ನಡೇತರರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯುವ ಘೋಷಣೆ ಸ್ವಾಗತಾರ್ಹ : ಡಾ.ಪುರುಷೋತ್ತಮ ಬಿಳಿಮಲೆ

Update: 2024-11-11 16:56 GMT

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಅನ್ಯ ಭಾಷಿಕರಿಗೆ ಉಚಿತ ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಘೋಷಿಸಿದ್ದು, ಕನ್ನಡದ ಉಳಿವಿನ ದೃಷ್ಠಿಯಿಂದ ಈ ನಿರ್ಧಾರ ಮಹತ್ವದ್ದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಪತ್ರ ಬರೆದಿರುವ ಅವರು, ರಾಜಧಾನಿಯಲ್ಲಿ ಅನ್ಯಭಾಷೆಗಳ, ಅನ್ಯ ಸಂಸ್ಕೃತಿಗಳ ಆಕ್ರಮಣದಿಂದ ನಲಗುತ್ತಿರುವ ಕನ್ನಡ ಭಾಷೆಗೆ ಈ ರೀತಿಯ ಭರವಸೆಗಳು ಹೊಸ ಚೈತನ್ಯವನ್ನು ತುಂಬುವುದರಲ್ಲಿ ಅನುಮಾನವಿಲ್ಲ. ಮಹಾನಗರ ಪಾಲಿಕೆಯಂತಹ ಬೃಹತ್ ಸೇವಾ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈ ಜೋಡಿಸಿದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಪರಿಣಾಮಕಾರಿಯಾದ ಫಲಿತಾಂಶಗಳನ್ನು ನಾವು ಪಡೆಯಬಹುದು ಎಂದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಘ-ಸಂಸ್ಥೆಗಳನ್ನು ಪ್ರೇರೇಪಿಸಿ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ನಿರಂತರ ಪ್ರಯತ್ನವನ್ನು ಜಾರಿಯಲ್ಲಿದೆ. ಇದು ವ್ಯಾಪಕವಾಗಬೇಕಾದರೆ ಸರಕಾರ ಮಟ್ಟದ ಯೋಜನೆಗಳು ಅವಶ್ಯಕತೆ ಇರುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಂತಹ ಸಂಸ್ಥೆಗಳ ಶಿಕ್ಷಣ ವಿಭಾಗಗಳಲ್ಲಿ ಈ ಕುರಿತು ಸ್ಪಷ್ಟ ಕ್ರಿಯಾ ಯೋಜನೆ ರೂಪಿತವಾದಲ್ಲಿ ಇದೊಂದು ಅಭಿಯಾನ ಮಾದರಿಯಲ್ಲಿ ಕೈಗೆತ್ತಿಕೊಳ್ಳುವ ಕೆಲಸವಾಗಬಹುದಾಗಿರುತ್ತದೆ ಎಂದು ಅವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡೇತರರಿಗೆ ಕನ್ನಡ ಕಲಿಕೆಗೆ ಪ್ರತ್ಯೇಕ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ತನ್ನದೇ ಆದ ಕಲಿಕಾ ಮಾದರಿಯನ್ನು ಜಾರಿಯಲ್ಲಿಟ್ಟಿರುತ್ತದೆ. ಆನ್ಲೈನ್ ಮೂಲಕವೂ ಕಲಿಕೆಯನ್ನು ಕೈಗೊಳ್ಳಬಹುದಾಗಿದ್ದು, ಈ ಮಾದರಿಯ ಕಲಿಕೆಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನ್ನ ಯೋಜನೆಯನ್ನು ಹೊಂದಿದೆ. ಸರಕಾರದ ಪ್ರಯತ್ನಕ್ಕೆ ಪ್ರಾಧಿಕಾರವು ತನ್ನೆಲ್ಲಾ ಸಹಕಾರವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News