ರೈತರಿಗೆ ನೀಡಿದ್ದ ವಕ್ಫ್ ನೋಟಿಸ್ ವಾಪಸ್ಗೆ ರಾಜ್ಯ ಸರಕಾರ ಆದೇಶ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿರುವ ‘ವಕ್ಫ್ ಆಸ್ತಿ’ಗೆ ಸಂಬಂಧಿಸಿದಂತೆ ‘ರೈತರು ಹಾಗೂ ಇತರೆ ಆಸ್ತಿಗಳನ್ನು ವಕ್ಫ್ ಮಂಡಳಿಯ ಹೆಸರಿಗೆ ಖಾತೆ ಮಾಡಬಾರದು. ಮುಟೇಷನ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು' ಎಂದು ಕಂದಾಯ ಇಲಾಖೆಯ ಸರಕಾರದ ಅಪರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
‘ವಕ್ಫ್ ಆಸ್ತಿ’ಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ರೈತರ ಹಾಗೂ ಇತರೆ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಮಾಡಬಾರದು’ ಎಂದು ಸೂಚನೆ ನೀಡಿದ್ದರು.
ಆ ಹಿನ್ನೆಲೆಯಲ್ಲಿ ಸಿಎಂ ಸೂಚನೆ ಅನುಸಾರ, ‘ರೈತರ ಜಮೀನು ಮತ್ತು ಇತರೆ ಆಸ್ತಿಗಳನ್ನು ಮುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರ ನೀಡಿದ ನಿರ್ದೇಶನಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು. ರೈತರಿಗೆ ನೀಡಲಾದ ಎಲ್ಲ ನೋಟಿಸ್‍ಗಳನ್ನೂ ತಕ್ಷಣವೇ ಹಿಂಪಡೆಯಬೇಕು. ಸದರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರ ವಿರುದ್ಧ ಕ್ರಮ ಜರುಗಿಸತಕ್ಕದಲ್ಲ’ ಎಂದು ನಿರ್ದೇಶನ ನೀಡಲಾಗಿದೆ.
‘ವಕ್ಫ್ ಆಸ್ತಿ’ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ್ದ ಎಲ್ಲ ಸುತ್ತೋಲೆಗಳನ್ನು ವಾಪಸ್ ಪಡೆಯಲಾಗಿತ್ತು. ಸಿಎಂ ಆದೇಶವಿದ್ದರೂ, ಮೇಲಧಿಕಾರಿಗಳ ಅನುಮೋದನೆ ಇಲ್ಲದೆ ನೆನಪೋಲೆ-2 ಹೊರಡಿಸಿದ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
‘ವಕ್ಫ್ ಆಸ್ತಿ’ಗೆ ಸಂಬಂಧಪಟ್ಟಂತೆ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ವಿಚಾರ ವಿವಾದದ ಸ್ವರೂಪ ಪಡೆದಿತ್ತು. ಇದರ ಬೆನ್ನಲ್ಲೇ ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿಯೂ ರೈತರಿಗೆ ಹಾಗೂ ಮಠ-ಮಾನ್ಯಗಳಿಗೆ ಸೇರಿದ ಖಾಸಗಿ ಆಸ್ತಿಗಳಿಗೂ ನೋಟಿಸ್ ನೀಡಲಾಗಿದೆ ಎಂಬ ವಿಚಾರವೂ ಚರ್ಚೆಗೆ ಗ್ರಾಸವಾಗಿತ್ತು.