ರಾಜ್ಯದಲ್ಲಿರುವುದು ‘ಗುರುವಾರದ ಸರಕಾರ’: ಆರ್.ಅಶೋಕ್ ವ್ಯಂಗ್ಯ
ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಕೇವಲ ‘ಗುರುವಾರದ ಸರಕಾರ’. ಆ ದಿನ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾತ್ರ ಮುಖ್ಯಮಂತ್ರಿ, ಬಹುತೇಕ ಸಚಿವರು, ಅಧಿಕಾರಿಗಳು ವಿಧಾನಸೌಧದಲ್ಲಿ, ವಿಕಾಸಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಬಾಕಿ ದಿನ ಎಲ್ಲರೂ ತಮ್ಮದೇ ಲೋಕದಲ್ಲಿ, ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿರುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರೇ, ಸಾಧನೆಗಳಿದ್ದರೆ ತಾನೆ ವರದಿ ಕೊಡೋದಕ್ಕೆ. ಪಾಪ ತಾವು ರಾಜ್ಯದಲ್ಲಿ ಅಧಿಕಾರ ತ್ಯಾಗ ಮಾಡಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮ ಪಡುತ್ತಿದ್ದೀರಿ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಏನು ಮಾಡುತ್ತಿದೆ, ರಾಜ್ಯದಲ್ಲಿ ತಮ್ಮ ಪಕ್ಷದ ಗೋಳೇನು ಎನ್ನುವ ಬಗ್ಗೆ ತಮಗೆ ಬಹುಶಃ ಮಾಹಿತಿ ಇಲ್ಲ ಎಂದು ಕಾಣುತ್ತದೆ ಎಂದು ಟೀಕಿಸಿದ್ದಾರೆ.
ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಸಿಎಂಗೆ ಕಾನೂನು ಹೋರಾಟ, ಕುರ್ಚಿ ಉಳಿಸಿಕೊಳ್ಳುವ ಚಿಂತೆ. ಮುಖ್ಯಮಂತ್ರಿ ಆಗಲು ತುದಿಗಾಲಲ್ಲಿ ನಿಂತಿರುವ ಡಿಸಿಎಂ ಸಾಹೇಬರಿಗೆ ಹಗಲು-ರಾತ್ರಿ ಅದೇ ಕನಸು. ಇನ್ನು ಉಳಿದ ಕೆಲವರಿಗೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಏನಾದರೂ ಲಾಭವಿದೆಯೇ ಎನ್ನುವ ಆಸೆ. ಇನ್ನು ಹಿರಿಯ ಶಾಸಕರಿಗೆ ಸಂಪುಟ ಪುನಾರಚನೆಯಲ್ಲಿ ಒಂದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಚಿಂತೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತಮಗೆ ತಿಳಿದೇ ಇದೆ. ಕಾಂಗ್ರೆಸ್ ಸರಕಾರದ ಬಳಿ ‘ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕೋದಕ್ಕೂ ದುಡ್ಡಿಲ್ಲ’ ಅಂತ ತಾವೇ ಹೇಳಿದ್ದೀರಿ. ಪರಿಸ್ಥಿತಿ ಹೀಗಿರುವಾಗ ಆಡಳಿತ ಹಳಿ ತಪ್ಪದೇ ಇರುತ್ತದೆಯೇ? ಪಾಪ ಕಾಂಗ್ರೆಸ್ ಸಚಿವರು ಏನಾದರೂ ಸಾಧನೆ ಮಾಡಿದ್ದರೆ ತಾನೇ ತಮಗೆ ವರದಿ ಕೊಡೋಕೆ’ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.