ಕಾಂಗ್ರೆಸ್ಸಿಗರ ಮಧ್ಯರಾತ್ರಿ ಸಭೆ ನಡುವೆ ಬಡವಾಗುತ್ತಿದೆ ರಾಜ್ಯ: ಬಿ.ವೈ.ವಿಜಯೇಂದ್ರ ಟೀಕೆ
ಬೆಂಗಳೂರು : ಕಾಂಗ್ರೆಸ್ಸಿಗರ ಮಧ್ಯರಾತ್ರಿ ಸಭೆಗಳಿಂದ ಕರ್ನಾಟಕ ಬಡವಾಗುತ್ತಿದೆ, ಜನರು ಪರಿತಪಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹೊರಗಡೆಯಿಂದ ಬಂದವರು’ ಎಂದು ಆಡಳಿತ ಪಕ್ಷದಲ್ಲಿ ಕೆಲವರಿಗೆ ಅನಿಸಿದೆ. ಒಂದು ಬಾರಿ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಎರಡನೇ ಬಾರಿಗೆ 2 ವರ್ಷ ಸಿಎಂ ಆಗಿದ್ದು, ಅವರೇ ಅಧಿಕಾರ ಬಿಟ್ಟುಕೊಡಬೇಕೆಂಬ ಚರ್ಚೆ ಈಗ ಆರಂಭವಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಸಿಎಂ ಆಗಿ 2 ವರ್ಷ ಪೂರೈಸಿದ್ದು, ಅಧಿಕಾರ ಬಿಟ್ಟು ಕೊಡುವರೇ ಇಲ್ಲವೇ ಎಂಬ ಅನುಮಾನ ಅವರಿಗೆ ಕಾಡುತ್ತಿದೆ. ಆದ್ದರಿಂದ ಅವರು ಒದ್ದು ಕಿತ್ಕೊಳ್ಳುವ ವಿಷಯವನ್ನು ನೆನಪು ಮಾಡಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಎಂದರೆ ಹಠವಾದಿಗಳು, ಒದ್ದು ಕಿತ್ಕೊಳ್ಳುವ ವಿಷಯದಲ್ಲಿ ನಿಸ್ಸೀಮರು. ಹಾಗಾಗಿ ಆ ಪ್ರಕ್ರಿಯೆಗೆ ಅವರು ಚಾಲನೆ ನೀಡಿದ್ದಾರೆ ಎಂದರು.
ಆಡಳಿತಾರೂಢ ಕಾಂಗ್ರೆಸ್ಸಿನ ಸರಣಿ ಸಭೆಗಳು ನಡೆಯುತ್ತಿವೆ. ಡಿನ್ನರ್ ಮೀಟಿಂಗ್, ಮಧ್ಯರಾತ್ರಿ ಸಭೆಗಳ ನಡುವೆ ನಮ್ಮ ಕಾನೂನು ಪ್ರಕೋಷ್ಠದ ಸಭೆ ಆಯೋಜಿಸಿರುವುದು ವಿಶೇಷ. ಈ ಸಭೆಗೆ 95 ಜನ ಅಪೇಕ್ಷಿತರಿದ್ದು, 85 ಜನರು ಭಾಗವಹಿಸಿದ್ದಾರೆ. ತಮಗೆಲ್ಲರಿಗೂ ಅಭಿನಂದನೆಗಳು ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
‘ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಕೇಸು, ಬೆದರಿಕೆ ಒಡ್ಡಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇದು ಆಡಳಿತ ಪಕ್ಷದ ಘನಂದಾರಿ ಕೆಲಸ. ಒಟ್ಟಾರೆಯಾಗಿ ಅಭಿವೃದ್ಧಿ ಶೂನ್ಯ ಸರಕಾರ ಇದು. ಬಿಜೆಪಿ ಕಾರ್ಯಕರ್ತರ ರಕ್ಷಣೆ ಕಾನೂನು ಪ್ರಕೋಷ್ಠದ ಕರ್ತವ್ಯ. ಹಾಗಾಗಿ ಈ ಸಭೆ ನಡೆಸಲಾಗುತ್ತಿದೆ’
-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ