ರಾಜ್ಯದಲ್ಲಿ ‘ವಿದ್ಯುತ್ ದರ ಕಡಿತ’

Update: 2024-04-01 16:29 GMT

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಬಳಕೆಯ ದರವನ್ನು ಕಡಿತ ಮಾಡಲಾಗಿದ್ದು, ನಿನ್ನೆಯಿಂದಲೇ (ಎ.1) ಇದು ಜಾರಿಗೆ ಬಂದಿದೆ. ಮೇ ತಿಂಗಳಿನಲ್ಲಿ ನೀಡಲಾಗುವ ಬಿಲ್‍ಗಳಿಗೆ ಅನ್ವಯವಾಗಲಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‍ಸಿ) 2024ರ ಜನವರಿ ಮತ್ತು ಫೆಬ್ರವರಿಯಲ್ಲಿ ವಾರ್ಷಿಕ ಪ್ರಕ್ರಿಯೆಗಳನ್ನು ನಡೆಸಿ ಎಸ್ಕಾಂಗಳ ಪ್ರತಿಪಾದನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಫೆ.22ರಂದು ಹೊರಡಿಸಿರುವ ಆದೇಶದ ಪ್ರಕಾರ ಹಿಂದಿನಿಂದ ಗೃಹ ಬಳಕೆಯ ವಿದ್ಯುತ್ ಮೇಲೆ 1.10 ರೂ.ಕಡಿತವಾಗಲಿದೆ.

1ರಿಂದ 100 ರೂ.ಒಳಗಿನ ವಿದ್ಯುತ್ ದರಕ್ಕೆ 4 ರೂ.ಗಿಂತಲೂ ಹೆಚ್ಚಿನ ದರ ಇತ್ತು. 100ರೂ. ಮೇಲ್ಪಟ್ಟ ವಿದ್ಯುತ್ ಬಳಕೆಗೆ ಶೂನ್ಯ ಯೂನಿಟ್‍ನಿಂದಲೇ 7 ರೂ.ಅನ್ವಯವಾಗುತ್ತಿತ್ತು. ಗೃಹಜ್ಯೋತಿ ಯೋಜನೆ ಜಾರಿಯಲ್ಲಿ ಇದ್ದುದ್ದರಿಂದ 200ಯೂನಿಟ್ ಒಳಗಿನ ವಿದ್ಯುತ್ ಬಳಕೆಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿರಲಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಯಿಂದ ಹೊರಗುಳಿದ ಗ್ರಾಹಕರಿಗೆ ವಿದ್ಯುತ್ ಶಾಕ್ ಆಗಿತ್ತು.

ಈ ಬಾರಿ ನಡೆದ ವಿಚಾರಣೆಯಲ್ಲಿ ಎಸ್ಕಾಂಗಳು 2024-25ನೆ ಸಾಲಿಗೆ 69,474ಕೋಟಿ ರೂ.ಗಳ ವಾರ್ಷಿಕ ಕಂದಾಯದ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಇದರಿಂದ 4,863 ಕೋಟಿ ರೂ.ಗಳ ಕಂದಾಯ ಕೊರತೆ ಕಂಡುಬಂದಿತ್ತು. ಇದನ್ನು ಸರಿದೂಗಿಸಲು ಪ್ರತಿ ಯೂನಿಟ್‍ಗೆ 49ರಿಂದ 163 ಪೈಸೆಗಳ ವರೆಗೆ ಸರಾಸರಿ 66 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ ಕೆಇಆರ್‍ಸಿ 64,944 ಕೋಟಿ ರೂ.ಕಂದಾಯ ಅಗತ್ಯತೆಗೆ ಅನುಮೋದನೆ ನೀಡಿದೆ.

ಇದರಿಂದ 290ಕೋಟಿ ರೂ.ಕಂದಾಯ ಹೆಚ್ಚಳ ಪ್ರಸ್ತಾಪವಾಗಿದೆ. ಇದರ ಆಧಾರದ ಮೇಲೆ ಗೃಹಬಳಕೆ, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಏತನೀರಾವರಿ, ಅಪಾರ್ಟ್‍ಮೆಂಟ್‍ಗಳು, ಕೈಗಾರಿಕಾ ಸ್ಥಾವರಗಳಲ್ಲಿ ವಿದ್ಯುತ್ ಬಳಕೆಯಾಗುವ ವಿದ್ಯುತ್‍ನ ದರವನ್ನು ವಿವಿಧ ಹಂತಗಳಲ್ಲಿ ಕಡಿತಗೊಳಿಸಲಾಗಿದೆ. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ದರ ಇಳಿಕೆಯಾಗಿರುವುದರಿಂದ ಪ್ರತಿ ಯೂನಿಟ್‍ಗೆ ನೀಡಲಾಗುತ್ತಿದ್ದ 50ಪೈಸೆ ರಿಯಾಯ್ತಿಯನ್ನು ಮುಂದುವರೆಸುವುದಿಲ್ಲ ಎಂದು ಕೆಇಆರ್‍ಸಿ ತಿಳಿಸಿದೆ.

ಪ್ರತಿ ಯೂನಿಟ್ ವಿದ್ಯುತ್‍ಗೆ 1.10ರೂ.ಕಡಿತ : ಡಿ.ಕೆ.ಶಿವಕುಮಾರ್

ಹದಿನೈದು ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆ ಮಾಡಲಾಗಿದೆ. 100 ಯುನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 1.10 ರೂ. ಕಡಿಮೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಇಂದಿನಿಂದಲೇ ಈ ದರ ಅನ್ವಯವಾಗಲಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಭಾವನೆಗಳ ಮೇಲೆ ಮಾಡುವ ರಾಜಕಾರಣ ಖಂಡಿತವಾಗಿಯೂ ಜನರ ಬದುಕಿನ ಗುಣಮಟ್ಟವನ್ನು ಬದಲಿಸುವುದಿಲ್ಲ. ನಾವು ಜನರ ಬದುಕು ಕಟ್ಟುವ ಪ್ರಯತ್ನ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News