ಚದುರಂಗ ಆಡಿದವರು ಮುಳುಗಿ ಹೋಗಿದ್ದಾರೆ, ಕೆಲಸದ ಆಧಾರದ ಮೇಲೆ ಜನ ತೀರ್ಮಾನ ಮಾಡುತ್ತಾರೆ: ಡಿಸಿಎಂ ಡಿ. ಕೆ. ಶಿವಕುಮಾರ್
ಬೆಂಗಳೂರು, ನ. 4: "ಚದುರಂಗ ಆಡಿದವರೆಲ್ಲಾ ಮುಳುಗಿ ಹೋಗಿದ್ದಾರೆ. ಜನರಿಗೆ ಏನು ಲಾಭವಾಗಿದೆ, ಯಾರ್ಯಾರು ಏನೇನು ಕೆಲಸ ಮಾಡಿದ್ದಾರೆ ಎನ್ನುವುದರ ಆಧಾರದ ಮೇಲೆ ಜನ ಈ ಬಾರಿಯ ಚುನಾವಣೆ ತೀರ್ಮಾನ ಮಾಡಲಿದ್ದಾರೆ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು.
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕೇಳಿದಾಗ "ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಸಿ.ಪಿ. ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುವುದನ್ನು ಜನರು ಪಟ್ಟಿ ಮಾಡುತ್ತಾರೆ. ಅದಕ್ಕೆ ಅವರೇ ಅಂಕ ನೀಡುತ್ತಾರೆ. ಇದರ ಹೊರತಾಗಿ ಯಾವ ರಣರಂಗವೂ ಇಲ್ಲ, ಯಾವುದೂ ಇಲ್ಲ" ಎಂದರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಾದವನು ತನ್ನ ಜನರಿಗೆ ಯಾವ ರೀತಿ ಸಹಾಯ ಮಾಡುತ್ತಾನೆ. ಏನು ಅನುಕೂಲ ಕಲ್ಪಿಸಿ ಕೊಡುತ್ತಾನೆ. ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಎನ್ನುವುದು ಮುಖ್ಯ" ಎಂದು ಹೇಳಿದರು.
ಜಯನಗರ ಕ್ಷೇತ್ರ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಒಂದಷ್ಟು ಸೆಲೆಬ್ರಿಟಿಗಳು ಆಗ್ರಹಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಎಂದು ಕೇಳಿದಾಗ, "ಈ ವಿಚಾರ ನನಗೆ ಗೊತ್ತಿದೆ. ಈಗಾಗಲೇ ನಾನು 40 ಕೋಟಿ ಅನುದಾನ ಕೊಟ್ಟಿದ್ದೇನೆ. ಆ ಕ್ಷೇತ್ರದ ಶಾಸಕರು ಭಾನುವಾರ ನನ್ನನ್ನು ಭೇಟಿ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಉತ್ತರ ಹೇಳಿದ್ದೇನೆ. ಆ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಂತರ ಮುಂದಿನ ವಿಚಾರ ಹೇಳುತ್ತೇನೆ" ಎಂದು ಹೇಳಿದರು.
ಬಿಜೆಪಿಯವರು ವಕ್ಫ್ ವಿಚಾರವಾಗಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, "ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ರಾಜಕೀಯ ಮಾಡುತ್ತಿದ್ದಾರೆ" ಎಂದರು.
ಆರ್. ಅಶೋಕ್, ಸಿ.ಟಿ. ರವಿ ಅವರೆಲ್ಲ ಚನ್ನಪ್ಪಟ್ಟಣದಲ್ಲಿ ಕುಮಾರಸ್ವಾಮಿಯವರಿಗೆ ಸಾಥ್ ಕೊಟ್ಟು, ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ ಎಂದು ಕೇಳಿದಾಗ, "ದಳದವರು ಮೈಸೂರು ಚಲೋ ಪಾದಯಾತ್ರೆ ವೇಳೆ ಸಾಥ್ ಕೊಡಲಿಲ್ಲ. ಅವರಂತೂ ಕೊಡಲಿಲ್ಲ, ಇವರಾದರೂ (ಬಿಜೆಪಿ) ಕೊಡಬೇಕಲ್ಲವೇ?" ಎಂದು ವ್ಯಂಗ್ಯವಾಡಿದರು.