ವಾಲ್ಮೀಕಿ ಹಗರಣ | ಈ.ಡಿ.ಯಿಂದ ಯಾವುದೇ ನೋಟಿಸ್ ಬಂದಿಲ್ಲ : ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ
ಬೆಂಗಳೂರು : ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ)ದಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ’ ಎಂದು ಮುಖ್ಯಮಂತ್ರಿ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ.
ನಿಗಮದಲ್ಲಿ 187 ಕೋಟಿ ರೂ.ಹಗರಣ ನಡೆದ ಆರೋಪವಿದ್ದು, ನಿಗಮದ ಹಣಕಾಸು ಖಾತೆ ಹೊಂದಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ದೊಡ್ಡ ಮೊತ್ತದ ಹಣಕಾಸಿನ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಈಡಿ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ಮಾಜಿ ಸಚಿವ ಬಿ.ನಾಗೇಂದ್ರ ಸೇರಿ ಕೆಲವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದೆ.
ಸಿಎಂ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸಿದ್ದವು. ಈ ಮಧ್ಯೆ ಸಿಎಂಗೆ ಈಡಿ ನೋಟಿಸ್ ನೀಡಿದೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕಾರ್ಯಾಲಯ ತಮಗೆ ಈಡಿ ನೋಟಿಸ್ ಬಂದಿಲ್ಲ, ಇದೊಂದು ಸುಳ್ಳು ಸುದ್ದಿ ಅಷ್ಟೇ ಎಂದು ಸ್ಪಷ್ಟನೆ ನೀಡಿದೆ.