ಸುದ್ದಿ ನೀಡುವ ಧಾವಂತದಲ್ಲಿ ಮೌಲ್ಯ ಕಳೆದುಕೊಳ್ಳಬಾರದು : ಡಾ.ವೀರಪ್ಪಮೊಯ್ಲಿ

Update: 2024-11-16 16:19 GMT

ಬೆಂಗಳೂರು : ಸುದ್ದಿ ನೀಡುವ ಧಾವಂತದಲ್ಲಿ ಮಾಧ್ಯಮಗಳು ಮೌಲ್ಯವನ್ನು ಕಳೆದುಕೊಳ್ಳಬಾರದು. ನಿಖರತೆ, ನಿಷ್ಠೆ, ನಂಬಿಕೆ, ಪ್ರಾಮಾಣಿಕತೆ, ವೃತ್ತಿಪರತೆ ಎಲ್ಲ ರಂಗದಲ್ಲೂ ಬಹುಮುಖ್ಯವಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ವಾರ್ತಾ ಇಲಾಖೆ ಕಚೇರಿಯ ಸುಲೋಚನಾ ಸಭಾಂಗಣದಲ್ಲಿ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ‘ಬದಲಾಗುತ್ತಿರುವ ಪತ್ರಿಕಾ ಮಾಧ್ಯಮದ ಸ್ವರೂಪ’ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಬದುಕಬೇಕಾದರೆ ಮಹತ್ತರ ಪಾತ್ರವನ್ನು ಮಾಧ್ಯಮ ನಿರ್ವಹಿಸಬೇಕು. ನಾಗರಿಕರ ಬದಲಾವಣೆಯ ಸ್ಪಂದನೆಗಳಿಗೆ ಮಾಧ್ಯಮ ಬದಲಾವಣೆಯಾಗಬೇಕು. ಮಾಧ್ಯಮದ ಅನುಗುಣವಾಗಿ ಸಮಾಜ ಬದಲಾಗಬೇಕು ಎಂದು ವೀರಪ್ಪಮೊಯ್ಲಿ ತಿಳಿಸಿದರು.

ಮಾಧ್ಯಮಗಳನ್ನು ನಾಶಪಡಿಸಲು ಸಾಧ್ಯವಾಗದು. ಅಂತೆಯೇ ಸಂವಿಧಾನದತ್ತವಾಗಿ ದೊರೆತಿರುವ ಸ್ವಾತಂತ್ರ್ಯವನ್ನು ಕಾಪಾಡುವ ಹೊಣೆಗಾರಿಕೆ ಮಾಧ್ಯಮಗಳದ್ದು. ಇಂದಿನ ಸವಾಲುಗಳಿಗೆ ಮಾಧ್ಯಮ ಕ್ಷೇತ್ರ ಸುಸಜ್ಜಿತಗೊಳ್ಳಬೇಕು ಎಂದು ವೀರಪ್ಪಮೊಯ್ಲಿ ಹೇಳಿದರು.

ಮಾಧ್ಯಮ ನಿಂತ ನೀರಲ್ಲ, ಮನುಷ್ಯ ಯಾವ ರೀತಿ ಬದಲಾವಣೆಯಾಗುತ್ತಾನೋ ಅದೇ ರೀತಿ ಮಾಧ್ಯಮ ಕ್ಷೇತ್ರವು ಬದಲಾಗುತ್ತಿದೆ. ಕ್ಲಿಷ್ಟತೆಗಳಿರಬಹುದು, ದೋಷಗಳಿರಬಹುದು, ಬದಲಾವಣೆಗಳಿರಬಹುದು ಸವಾಲು ನೀಡುತ್ತಿರುವ ಕ್ಷೇತ್ರದಲ್ಲಿ ಸಾಧಕ-ಬಾಧಕಗಳನ್ನು ತೆರೆದಿಡುತ್ತಿದೆ. ಇದೆಲ್ಲ ಬದಲಾವಣೆಯ ಲಕ್ಷಣಗಳು ಎಂದು ವೀರಪ್ಪಮೊಯ್ಲಿ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಈ ಕಾರ್ಯಕ್ರಮಕ್ಕೆ ವೀರಪ್ಪ ಮೊಯ್ಲಿ ಅವರು ಬಂದಿರುವುದು ಕರ್ನಾಟಕ ಮಾಧ್ಯಮ ಅಕಾಡಮಿಗೆ ಹೆಮ್ಮೆಯ ವಿಷಯ. ಏಕೆಂದರೆ ಗುಂಡೂರಾವ್ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರು ಮಾಧ್ಯಮ ಅಕಾಡಮಿಯನ್ನು ಅಸ್ಥಿತ್ವಕ್ಕೆ ತಂದರು. ಆಗಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ ಅವರ ನೇತೃತ್ವದಲ್ಲಿ ಕನ್ನಡ ಮಾಧ್ಯಮ ಅಕಾಡೆಮಿ ಸ್ಥಾಪನೆ ಮಾಡಿದರು ಎಂದರು.

42 ವರ್ಷದ ಇತಿಹಾಸ ಹೊಂದಿರುವ ಕರ್ನಾಟಕ ಪತ್ರಿಕಾ ಅಕಾಡಮಿ ಕೂಡ ಬದಲಾವಣೆಗೆ ಒಳಗಾಗಿದೆ ಮತ್ತು ಅದು ಈಗ ಎಲ್ಲಾ ರೀತಿಯ ಮಾಧ್ಯಮ ವೇದಿಕೆಗಳನ್ನು ಒಳಗೊಂಡಿದೆ, ಆದ್ದರಿಂದ ಇದು ಕರ್ನಾಟಕ ಮಾಧ್ಯಮ ಅಕಾಡಮಿಯಾಗಿದೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಮಾಧ್ಯಮ ಅಕಾಡೆಮಿ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ. ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಲಿಂಗ ತಾರತಮ್ಯವನ್ನು ಕಡಿಮೆ ಮಾಡಿ ಅಕಾಡೆಮಿಯನ್ನು ಮುನ್ನಡೆಸಲು ಮಹಿಳೆಯನ್ನು ನೇಮಿಸಿದೆ ಎಂದು ಆಯೇಶಾ ಖಾನಂ ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಮಾಧ್ಯಮ ಕ್ಷೇತ್ರದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದಾಗಿ ಮಾಹಿತಿಯನ್ನು ಅತ್ಯಂತ ವೇಗವಾಗಿ ತಲುಪಿಸಲು ಸಾಧ್ಯವಾಗಿದೆ. ಇದು ಎರಡು ಅಲಗಿನ ಕತ್ತಿಯಿದ್ದ ಹಾಗೆ. ಮಾಹಿತಿ ಹಂಚಿಕೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರುವ ಪ್ರತಿಯೊಬ್ಬರೂ ಪತ್ರಕರ್ತರು, ಛಾಯಾಗ್ರಾಹಕರೇ ಆಗಿಬಿಟ್ಟಿದ್ದಾರೆ. ಇದರಿಂದಾಗಿ ಸುಳ್ಳು ಸುದ್ದಿಗಳು, ವದಂತಿಗಳು ಹರಡುವುದೂ ಹೆಚ್ಚಾಗಿದೆ ಎಂದು ಆಯೇಶಾ ಖಾನಂ ಹೇಳಿದರು.

ಸತ್ಯ ಮತ್ತು ನ್ಯಾಯ ಮಾಧ್ಯಮಗಳ ಆತ್ಮವಿದ್ದಂತೆ. ಇದನ್ನು ಯುವ ಪತ್ರಕರ್ತರು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕಾಗಿದೆ. ಎಲ್ಲ ಸವಾಲುಗಳ ನಡುವೆಯೂ ಪತ್ರಿಕೆಗಳು ನಮ್ಮ ದೇಶದ ಸ್ಥಿತಿಗತಿಗೆ ಸಾಮಾಜಿಕ ಮೌಲ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಹೀಗೆಯೇ ಇರಬೇಕೇ ಹೊರತು ನಾವು ಬಯಸಿದ್ದನ್ನು ನೋಡುವ ಮಾಯಾದರ್ಪಣವಾಗಬಾರದು. ಈ ಎಚ್ಚರಿಕೆ ಪತ್ರಕರ್ತರಲ್ಲಿ, ನಾಗರಿಕರಲ್ಲಿ ಸದಾ ಜಾಗೃತವಾಗಿರಬೇಕು ಎಂದು ಆಯೇಶಾ ಖಾನಂ ಹೇಳಿದರು.

ಅಜಿಂ ಪ್ರೇಂಜಿ ವಿವಿ ಪ್ರಾಧ್ಯಾಪಕ ಡಾ.ಎ.ನಾರಾಯಣ ಮಾತನಾಡಿ, ‘ಎಲ್ಲಾ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮವೇ ಮಿಗಿಲು. ಆದರೆ ಇಂದಿನ ದಿನಗಳಲ್ಲಿ ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಪತ್ರಿಕಾ ಮಾಧ್ಯಮವು ಪತ್ರಿಕಾ ರಂಗ ಬಹಳಷ್ಟು ಸೊರಗಿಹೋಗಿದೆ. ಇನ್ನೂ 5-6 ವರ್ಷಗಳ ನಂತರ ರಾಷ್ಟ್ರೀಯ ಪತ್ರಿಕಾ ದಿನ ಎಂದು ಸ್ಮರಿಸಲಾಗುತ್ತಿರುವ ಈ ದಿನವನ್ನು ಸಂಸ್ಮರಣಾ ದಿನವನ್ನಾಗಿ ಆಚರಿಸಬೇಕಾಗಬಹುದು. ಅಂತಹ ವಾತಾವರಣ ನಿರ್ಮಾವಾಗುವ ಸ್ಥಿತಿ ಬರಬಾರದು. ಪತ್ರಿಕೆಗಳಲ್ಲಿ ವಸ್ತುನಿಷ್ಟ ಸುದ್ದಿಗಳನ್ನು ಪ್ರಕಟಿಸುವುದರ ಮೂಲಕ ಪತ್ರಿಕೆಗಳ ಉಳಿವಿಗಾಗಿ ಶ್ರಮಿಸಬೇಕು ಎಂದರು.

ರಾಜಕೀಯ ಜಾಹೀರಾತು ಆಧಾರಿತ ಅನುಕಂಪದಿಂದಾಗಿ ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ನಡೆಸಲಾಗುತ್ತಿದೆ. ಆದರೆ, ಪತ್ರಿಕೆಗಳನ್ನು ಬರೀ ಜಾಹೀರಾತುಗಳಿಗೆ ಮಾತ್ರ ಮೀಸಲಿಡಬಾರದು, ನೈಜತೆಯಿಂದ ಕೂಡಿದ ಸುದ್ದಿಗಳನ್ನು ಪ್ರಕಟಿಸಿದರೆ ಓದುಗರಲ್ಲಿ ಉತ್ಸಾಹ ಮೂಡುತ್ತದೆ. ಜಾಹೀರಾತುಗಳಿಂದಲೇ ಕೂಡಿರುವ ಪತ್ರಿಕೆಗಳು ಓದುಗರಿಗೆ ಬೇಡವಾಗುತ್ತದೆ. ಓದುಗರಿಗೆ ಬೇಡವಾದ ಪತ್ರಿಕೆಗಳು ಎಷ್ಟು ದಿನ ಉಳಿಯಲು ಸಾಧ್ಯ ಎಂದು ಡಾ.ಎ.ನಾರಾಯಣ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡಮಿಯ ಕಾರ್ಯದರ್ಶಿ ಎಂ.ಸಹನ, ಮಾಧ್ಯಮ ಅಕಾಡಮಿಯ ಸದಸ್ಯರುಗಳು ಹಾಗೂ ಹಿರಿಯ ಪತ್ರಕರ್ತರು ಸೇರಿದಂತೆ ವಿವಿಧ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪತ್ರಿಕೆಗಳು ಸಮಾಜದ ಸಾಕ್ಷಿ ಪ್ರಜ್ಞೆಯಿಂದ್ದಂತೆ :

‘ಹಲವಾರು ಸವಾಲುಗಳ ನಡುವೆಯೂ ಮಾಧ್ಯಮಗಳು ಸತ್ಯ, ಪಾರದರ್ಶಕತೆ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಪತ್ರಿಕೆಗಳು ಸಮಾಜದ ಸಾಕ್ಷಿ ಪ್ರಜ್ಞೆಯಿಂದ್ದಂತೆ. ಅವರ ನೈತಿಕ ಬದ್ಧತೆ ಸುದ್ದಿಗಳನ್ನು ಸಂವೇದನೆಗೊಳಿಸುವ ಪ್ರವೃತ್ತಿಗೆ ತಡೆಗೋಡೆಯಿದ್ದಂತೆ. ಇದನ್ನು ಕಾಪಾಡಿಕೊಳ್ಳುವ ತುರ್ತು ಅಗತ್ಯವಿದೆ’

-ಆಯೇಶಾ ಖಾನಂ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News