ವಕ್ಫ್ ಮಂಡಳಿ ಖಾತೆಯ ಹಣ ಅಕ್ರಮ ವರ್ಗಾವಣೆ ಆರೋಪ : ಎಫ್‍ಐಆರ್ ದಾಖಲು

Update: 2024-07-14 14:16 GMT

Photo credit: thecognate.com

ಬೆಂಗಳೂರು : ರಾಜ್ಯ ವಕ್ಫ್ ಮಂಡಳಿಯ ಖಾತೆಯಲ್ಲಿನ ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದಡಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಲ್ಫಿಕಾರುಲ್ಲಾ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮಂಡಳಿಯ ಬ್ಯಾಂಕ್ ಖಾತೆಯಲ್ಲಿದ್ದ 4.45 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಎಂಬುವರು ನೀಡಿರುವ ದೂರಿನನ್ವಯ ಹೈಗ್ರೌಂಡ್ಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

2016ರಲ್ಲಿ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಝುಲ್ಫಿಕಾರುಲ್ಲಾ ಅವರು ಮಂಡಳಿಯ ಗಮನಕ್ಕೆ ತರದೆ ಖಾತೆಯಲ್ಲಿದ್ದ 4.45 ಕೋಟಿ ರೂ. ಹಣವನ್ನು ವರ್ಗಾಯಿಸಿರುವ ಆರೋಪವಿದೆ. ಬೆನ್ಸೆನ್ ಟೌನ್‍ನಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ವಕ್ಫ್ ಮಂಡಳಿಯ ಖಾತೆಯಿಂದ ಚೆಕ್ ಮೂಲಕ ವಿಜಯಾ ಬ್ಯಾಂಕ್, ಚಿಂತಾಮಣಿ ಶಾಖೆಯಲ್ಲಿರುವ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಎಫ್‍ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಕ್ರಮಕ್ಕೆ ಮುಂದಾಗಿದ್ದ ವಕ್ಫ್ ಮಂಡಳಿ, ಹಣ ವರ್ಗಾವಣೆಯಾಗಿರುವುದರ ಕುರಿತು ಸಮರ್ಪಕ ವಿವರ ನೀಡುವಂತೆ 2022ರಲ್ಲಿ ಝುಲ್ಫಿಕಾರುಲ್ಲಾ ಅವರಿಗೆ ನೋಟಿಸ್ ನೀಡಿತ್ತು. ಆದರೆ, ನೋಟಿಸ್‍ಗೆ ಉತ್ತರಿಸದಿದ್ದಾಗ ಝುಲ್ಫಿಕಾರುಲ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖೆ ಸೂಚಿಸಿದೆ. ಇದರನ್ವಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಕ್ಫ್ ಮೀರ್ ಅಹಮದ್ ಅಬ್ಬಾಸ್ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಹೈಗ್ರೌಂಡ್ಸ್ ಠಾಣಾ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News