ಉರ್ದು ಅಕಾಡೆಮಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಬೇಕು : ಝಮೀರ್ ಅಹ್ಮದ್ ಖಾನ್

Update: 2024-08-10 16:44 GMT

ಬೆಂಗಳೂರು : ರಾಜ್ಯ ಉರ್ದು ಅಕಾಡೆಮಿಯ ಕಾರ್ಯಕ್ರಮಗಳು ಕೇವಲ ಬೆಂಗಳೂರು ಕೇಂದ್ರೀಕೃತ ಆಗಬಾರದು. ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

ಶನಿವಾರ ನಗರದ ಕೆಎಂಡಿಸಿ ಭವನದಲ್ಲಿ ರಾಜ್ಯ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಅವರು ಮಾತನಾಡಿದರು.

ಬಿಜೆಪಿ ಸರಕಾರದಲ್ಲಿ ಉರ್ದು ಅಕಾಡೆಮಿಗೆ ಸೂಕ್ತ ಅನುದಾನ ನೀಡಿರಲಿಲ್ಲ. ಕಾಂಗ್ರೆಸ್ ಸರಕಾರ ಬಂದ ನಂತರ ಬಜೆಟ್‍ನಲ್ಲಿ 1.50 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಮುಂದಿನ ವರ್ಷ ಈ ಮೊತ್ತ 10 ರಿಂದ 15 ಕೋಟಿ ರೂ.ಗೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಖಾಸಗಿ ಶಾಲೆಗಳಲ್ಲೂ ಸರಕಾರದ ಆದೇಶದ ಪ್ರಕಾರ ಉರ್ದು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸುವ ಸಂಬಂಧ ಶಿಕ್ಷಣ ಸಚಿವರ ಜತೆ ಮಾತನಾಡುತ್ತೇನೆ. 30 ದಿನಗಳಲ್ಲಿ ಉರ್ದು ಕಲಿಸುವ ತರಗತಿ ಆರಂಭ ಮಾಡಿರುವುದು ಸ್ವಾಗತಾರ್ಹ. ನಾನೂ ಸಹ ವಿದ್ಯಾರ್ಥಿ ಆಗಿ ಉರ್ದು ಕಲಿಯಲು ಬರುತ್ತೇನೆ ಎಂದು ಝಮೀರ್ ಅಹ್ಮದ್ ತಿಳಿಸಿದರು.

50 ಸಾವಿರ ರೂ.ಬಹುಮಾನ: ಇದೇ ಸಂದರ್ಭದಲ್ಲಿ 30 ದಿನಗಳಲ್ಲಿ ಉರ್ದು ಕಲಿಯುವ ಪರೀಕ್ಷೆಯಲ್ಲಿ ಶೇ.100 ರಷ್ಟು ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಸಚಿವ ಝಮೀರ್ ಅಹ್ಮದ್ ಖಾನ್, ವೈಯಕ್ತಿಕವಾಗಿ ತಲಾ 50 ಸಾವಿರ ರೂ.ಬಹುಮಾನ ನೀಡಿದರು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಬಸವಣ್ಣ ನವರ ವಚನ ಸೇರಿದಂತೆ ಮಹಾನ್ ಪುರುಷರ ಜೀವನ ಕೃತಿಯನ್ನು ಉರ್ದು ಭಾಷೆಯಲ್ಲಿ ಪ್ರಕಟಿಸಬೇಕು. ಹೆಸರಾಂತ ಸಾಹಿತಿಗಳ ಉತ್ತಮ ಕೃತಿಗಳು ಉರ್ದು ಭಾಷೆಗೆ ತರ್ಜುಮೆ ಮಾಡಬೇಕು. ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಉರ್ದು ಭಾಷೆಗೆ ಹೆಚ್ಚು ಆದ್ಯತೆ ನೀಡಿದ್ದರು. ಆ ಕುರಿತು ಕೃತಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್, ವಿಧಾನಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ಉರ್ದು ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಅಲಿ ಖಾಝಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News