ಮಸೀದಿ ಅಭಿವೃದ್ಧಿ ಹಣ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ : ಝಮೀರ್ ಅಹ್ಮದ್ ಖಾನ್

Update: 2024-09-03 16:17 GMT

ಹಾವೇರಿ : ಮಸೀದಿ ಅಭಿವೃದ್ಧಿ ಅನುದಾನ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಹಣ ದುರ್ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಹಾವೇರಿಯಲ್ಲಿ ಹಾವೇರಿ-ಗದಗ ಜಿಲ್ಲೆಗಳ ವಕ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಯಿಂದ ಮಸೀದಿ ಅಭಿವೃದ್ಧಿ, ಖಬಾರಸ್ಥಾನ ನಿರ್ವಹಣೆ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಅನುದಾನದ ಹಣ ದುರ್ಬಳಕೆ ಆಗುತ್ತಿರುವ ದೂರುಗಳು ಬಂದಿವೆ. ಅದೇ ರೀತಿ ಅನುದಾನ ಕೊಡಿಸಿದ್ದೇವೆ ಎಂದು ಲಂಚ ಪಡೆಯುತ್ತಿರುವ ಬಗ್ಗೆಯೂ ಮಾಹಿತಿ ಬಂದಿದ್ದು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಯಾರಾದರೂ ಲಂಚ ಕೇಳಿದರೆ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಗಮನಕ್ಕೆ ತನ್ನಿ. ಅವರನ್ನು ಜೈಲಿಗೆ ಹಾಕಿಸುವ ಕೆಲಸ ನಾನೇ ಮಾಡುತ್ತೇನೆ. ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ವಕ್ಫ್ ಆಸ್ತಿ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದು ದೇವರ ಕೆಲಸ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ವಕ್ಫ್ ಬೋರ್ಡ್ ನಿಂದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವು ದುರುದ್ದೇಶದಿಂದ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ವಕ್ಫ್ ಆಸ್ತಿ ಸರಕಾರದ್ದಲ್ಲ, ಅದು ಸಮುದಾಯದ್ದು. ವಕ್ಫ್ ಕಾಯ್ದೆಯ ಉದ್ದೇಶಿತ ತಿದ್ದುಪಡಿಗೆ ನಮ್ಮ ವಿರೋಧ ಇದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಇದೇ ಸಂದರ್ಭದಲ್ಲಿ ಹಾವೇರಿ-ಗದಗ ಜಿಲ್ಲೆಯ 32 ಮಸೀದಿಗಳ ಅಭಿವೃದ್ಧಿಗೆ 8.50 ಕೋಟಿ ರೂ. ಅನುದಾನದ ಚೆಕ್ ವಿತರಿಸಲಾಯಿತು. ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ಅಜ್ಜಮ್ ಪೀರ್ ಖಾದ್ರಿ, ಮುಖಂಡರಾದ ಯಾಸೀರ್ ಪಠಾಣ್, ಫೈಝ್ ಇಬ್ರಾಹೀಂ, ಸಿರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News