ಬಂಟ್ವಾಳ: ರೂ. 1 ಕೋಟಿಗೂ ಅಧಿಕ ಮೌಲ್ಯದ ಅಕ್ಕಿ ಕೊರತೆ; ದಾಸ್ತಾನು ಕೇಂದ್ರಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ

Update: 2023-08-18 14:45 GMT

ಬಂಟ್ವಾಳ : ಭಾರತೀಯ ಆಹಾರ ನಿಗಮದಿಂದ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಕಳುಹಿಸಲಾದ ಅಕ್ಕಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ತಲಪಾಡಿಯಲ್ಲಿರುವ ದಾಸ್ತಾನು ಕೇಂದ್ರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪ್ರಕರಣದ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅವರು ಇಲ್ಲಿನ ಗೊಡೌನ್ ನಲ್ಲಿ ಇರಿಸಲಾದ ಅಕ್ಕಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕ ತನಿಖೆ ಮಾಡಿದ್ದಾರೆ. ಅ ಸಂದರ್ಭ ದಾಸ್ತಾನು ಇರುವ ಅಕ್ಕಿಯ ಲೆಕ್ಕಾಚಾರ ರೆಕಾರ್ಡ್ ಮಾಡಿದ್ದಾರೆ. ಈ ಬಗ್ಗೆ ಕೆ.ಎಸ್.ಎಫ್.ಸಿ.ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕೆ.ಎಸ್.ಎಫ್.ಸಿ. ಮೇಲಾಧಿಕಾರಿಗಳ ಸೂಚನೆಯಂತೆ ನಿಗಮದ ಜಿಲ್ಲಾ ಅಧಿಕಾರಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

ದಾಸ್ತಾನು ಕೊಠಡಿಯಲ್ಲಿ ಯಾಕೆ  ವ್ಯತ್ಯಾಸ ಆಗಿದೆ ಎಂಬುದರ ಮೇಲೆ ಇಲ್ಲಿನ ಡಿಪೋ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದೇ‌ನೆ. ಯಾವ ರೀತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬುದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿದ ಬಳಿಕ ಸಂಪೂರ್ಣವಾದ ಚಿತ್ರಣ ಕಂಡು ಬರಬಹುದು. ಬಹಳ ದಿನಗಳ ಸಮಸ್ಯೆಗಳು ಇರಬಹುದು. ಅದಕ್ಕೆ ಬೇಕಾದ ದಾಖಲೆಗಳನ್ನು ಮಾಡಲು ತಿಳಿಸಿದ್ದೇನೆ. ಕೆ.ಎಸ್.ಎಫ್.ಸಿ‌‌.‌ ರಾಜ್ಯಮಟ್ಟದಲ್ಲಿರುವ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿದ್ದೇನೆ. ಅವರು ಬಂದು ನೋಡಿ ವರದಿ ನೀಡುತ್ತಾರೆ ಎಂದು ಡಿಸಿ ತಿಳಿಸಿದ್ದಾರೆ.

ಸುಮಾರು 1,32,36,030 ರೂ. ಮೌಲ್ಯದ ಅಕ್ಕಿಯ ಕೊರತೆ ದಾಸ್ತಾನು ಕೊಠಡಿಯಲ್ಲಿ ಕಂಡು ಬಂದಿದ್ದು, ಅವ್ಯವಹಾರ ನಡೆದಿರಬೇಕು ಎಂದು ನಿಗಮದ ಅಧಿಕಾರಿಗಳು ನಗರ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರಿನ ಮೇರೆಗೆ ಬಂಟ್ವಾಳ ನಗರ ಠಾಣಾಧಿಕಾರಿ ರಾಮಕೃಷ್ಣ ಅಪರಾಧ ವಿಭಾಗದ ಎಸ್.ಐ. ಕಲೈಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ದಾಸ್ತಾನು ಇರಿಸಲಾದ ಅಕ್ಕಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂಬ ಸಾರ್ವಜನಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಪತ್ರದ ಮುಖಾಂತರ ಸೂಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News