ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶಿಥಲಗೃಹ ನಿರ್ಮಾಣಕ್ಕೆ ಕ್ರಮ : ಶಿವಾನಂದ ಪಾಟೀಲ್

Update: 2024-12-13 11:03 GMT

ಶಿವಾನಂದ ಎಸ್.ಪಾಟೀಲ್

ಬೆಳಗಾವಿ (ಸುವರ್ಣ ವಿಧಾನಸೌಧ) : ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 144 ಕೋಟಿ ರೂ.ವೆಚ್ಚದಲ್ಲಿ ಶಿಥಲಗೃಹ ಮತ್ತು ಇನ್ನಿತರ ಮೂಲಸೌಕರ್ಯ ಕಾರ್ಯಗಳನ್ನು ಕೈಗೊಳ್ಳಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ಸಾಲಿನ ಆರ್‍ಐಡಿಎಫ್-30 ಯೋಜನೆಯಡಿ 254ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡುವಂತೆ 2024ರ ಮೇ 18ರಂದು ಕೋರಲಾಗಿತ್ತು. ಆ.8ರಂದು ಆರ್ಥಿಕ ಇಲಾಖೆ 144ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿರುತ್ತದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮಕ್ಕೆ ತಿದ್ದುಪಡಿ ತಂದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೃಷಿ ಉತ್ಪನ್ನಗಳ ಆವಕ ಹೆಚ್ಚಾಗಿ ಬರುತ್ತಿವೆ. ರೈತರು ಬೆಳೆಗೆ ಯೋಗ್ಯ ದರ ಹಾಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೀಥಲಗೃಹಗಳನ್ನು ಸ್ಥಾಪಿಸಲು ಮತ್ತು ಮೂಲಸೌಲಭ್ಯ ಕಲ್ಪಿಸಲು ಶಾಸಕರಿಂದ ಕೋರಿಕೆಗಳು ಸ್ವೀಕೃತವಾಗಿವೆ. ಈ ಹಿನ್ನಲೆಯಲ್ಲಿ 2024-25ನೆ ಸಾಲಿನ ಆರ್‍ಡಿಎಫ್-30 ಯೋಜನೆಯಡಿ 374ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಕೋರಲಾಗಿದೆ ಎಂದು ಹೇಳಿದರು.

ಅರಸೀಕೆರೆ ಅಬ್ಬನಘಟ್ಟ ಕಾವಲ್, ಉಪಮಾರುಕಟ್ಟೆ ಪ್ರಾಂಗಣದಲ್ಲಿ 5ಕೋಟಿ ರೂ.ವೆಚ್ಚದಲ್ಲಿ ಶೀಥಲಗೃಹ ಸ್ಥಾಪಿಸುವ ವಿಷಯವು ಹೆಚ್ಚುವರಿ ಅನುದಾನ ಕೋರಿ ಸಲ್ಲಿಸುವ ಪ್ರಸ್ತಾವನೆಯಲ್ಲಿ ಸೇರಿದ್ದು, ಅನುಮೋದನೆ ದೊರೆತ ಕೂಡಲೆ ಶೀಥಲಗೃಹ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ನಬಾರ್ಡ್‍ನಿಂದ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲದೆ, ತೋಟಗಾರಿಕೆ ಇಲಾಖೆ, ಕೆಫೆಟ್‍ನಲ್ಲೂ ಶೀಥಲಗೃಹ ನಿರ್ಮಾಣಕ್ಕೆ ಅನುದಾನ ಪಡೆಯಬಹುದಾಗಿದ್ದು, ಅರಸೀಕೆರೆಯಲ್ಲಿ ಶಿಥಲಗೃಹ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News