ಶೆಟ್ಟರ್ ಮನೆಗೆ ರತ್ನಗಂಬಳಿ ಹಾಸೋಣ: ಡಿ.ಕೆ.ಶಿವಕುಮಾರ್ ವ್ಯಂಗ್ಯ

Update: 2024-12-25 10:09 GMT

 ಡಿ.ಕೆ.ಶಿವಕುಮಾರ್ | PC : PTI

ಬೆಳಗಾವಿ: ''ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಗದೀಶ್ ಶೆಟ್ಟರ್ ಅವರ ಮನೆಯವರೆಗೂ ರತ್ನಗಂಬಳಿ ಹಾಕಿಸೋಣ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಶಾಲಾ ಮೈದಾನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಸುವರ್ಣಸೌಧದಲ್ಲಿ ಡಿ.27ರಂದು ನಡೆಯಲಿರುವ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಗೌರವಯುತವಾಗಿ ಆಹ್ವಾನ ಮಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಮಾಡಿರುವ ಆರೋಪಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

"ನನ್ನ ಸಮ್ಮುಖದಲ್ಲೇ ಶೆಟ್ಟರ್ ಗೆ ಮುಖ್ಯಮಂತ್ರಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಆರ್.ಅಶೋಕ್, ನಾರಾಯಣಸ್ವಾಮಿ, ಸಭಾಪತಿಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸೇರಿಸಿದ್ದೇವೆ. ಆ ಕಾರ್ಯಕ್ರಮ ಬಿಡಿ, ಅವರ ಸರ್ಕಾರ ಇದ್ದಾಗ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರ ಪಾರ್ಥಿವ ಶರೀರವನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಅವರ ಬೀಗರಿಗೆ ಸರಿಯಾಗಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲವಲ್ಲ, ಅದರ ಬಗ್ಗೆ ಅವರು ಮೊದಲು ಮಾತನಾಡಲಿ. ಆಗ ಬಿಜೆಪಿ ನಾಯಕರರು ಯಾರೂ ಮಾತನಾಡಲಿಲ್ಲ. ವಿಶೇಷ ಮಿಲಿಟರಿ ವಿಮಾನದಲ್ಲಿ ಪಾರ್ಥೀವ ಶರೀರ ತಂದು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲು ಆಗಲಿಲ್ಲ. ಆಗ ಶೆಟ್ಟರ್ ಅವರ ಬಾಯಿಗೆ ಏನಾಗಿತ್ತು” ಎಂದು ಡಿಕೆಶಿ ತಿರುಗೇಟು ನೀಡಿದರು.

ಶೆಟ್ಟರ್ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಿ, ನಾನು ಸೇವಕನಂತೆ ಕೆಲಸ ಮಾಡುವೆ

ಗಾಂಧಿ ಮೇಲೆ ಪ್ರೀತಿ ಇದ್ದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಾರ್ಯಕ್ರಮ ಮಾಡಿದ್ದರೆ 500 ಕೋಟಿ ರೂ. ಖರ್ಚು ಮಾಡಲು ಸಿದ್ಧವಿದ್ದೆವು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈಗಲೂ ಮಾಡಲಿ. ನಾವು ಈ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ಆಚರಣೆ ಮಾಡುತ್ತೇವೆ. ಅವರು ಕೂಡ ಈ ಕಾರ್ಯಕ್ರಮ ಮಾಡಲಿ ಎಂದು ಮಾಧ್ಯಮಗಳ ಮೂಲಕ ನಮ್ರತೆಯಿಂದ ಜನರ ಪರವಾಗಿ ಮನವಿ ಮಾಡುತ್ತೇನೆ. ಅವರೇ ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮ ಮಾಡಲಿ, ಅವರ ಹಿಂದೆ ನಿಂತು ನಾವು ಸೇವಕರಂತೆ ಕೆಲಸ ಮಾಡುತ್ತೇವೆ”ಎಂದರು.

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವ ಹೋಗಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯದಲ್ಲಿ ನಾವು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ತಮ್ಮ ಜವಾಬ್ದಾರಿಯಿಂದ ಕಾರ್ಯಕ್ರಮ ಮಾಡಲಿ. ದೇಶದ ನೋಟಿನಲ್ಲಿ ಗಾಂಧಿ ಅವರ ಚಿತ್ರ ಏಕಿದೆ? ಅವರಿಗೆ ಗಾಂಧಿ ಬಗ್ಗೆ ಅರಿವಿಲ್ಲವೇ? ಗಾಂಧಿ ಅವರ ಹಕ್ಕನ್ನು ಬಿಜೆಪಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿಲ್ಲ. ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವುದು ಕಾಂಗ್ರೆಸಿಗರಿಗೆ ಮಾತ್ರ” ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News