ಮಣಿಪುರದಲ್ಲಿ ಸೇನಾ ವಾಹನ ಪಲ್ಟಿ ದುರಂತ : ಚಿಕ್ಕೋಡಿ ಮೂಲದ ಯೋಧ ಹುತಾತ್ಮ
ಬೆಳಗಾವಿ : ಮಣಿಪುರದ ಬೊಂಬಾಲಾ ಕ್ಷೇತ್ರದಲ್ಲಿ ಜರುಗಿದ ಸೇನಾ ವಾಹನ ಪಲ್ಟಿ ದುರಂತದಲ್ಲಿ ಚಿಕ್ಕೋಡಿ ಮೂಲದ ಕುಪ್ಪಾನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತಾ(42) ಹುತಾತ್ಮರಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಸುಮಾರಿಗೆ ದಾರಿಮಧ್ಯ ಗುಡ್ಡ ಕುಸಿದ ಪರಿಣಾಮ ಸೇನೆಯ 2.5 ಡೈಟನ್ ವಾಹನ ಪಲ್ಟಿಯಾಗಿತ್ತು. ಸೇನಾ ವಾಹನದಲ್ಲಿ ಒಟ್ಟು ಆರು ಜನ ಯೋಧರು ಪ್ರಯಾಣಿಸುತ್ತಿದ್ದರು. ಆರು ಯೋಧರ ಪೈಕಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಪ್ಪಾನವಾಡಿ ಗ್ರಾಮದ ಸುಭಾಷ ಖೋತಾ, 2002ರಲ್ಲಿ ಸೇನೆಗೆ ಸೇರಿದ್ದು, 22 ವರ್ಷ ಸೇವೆ ಸಲ್ಲಿಸಿದ್ದರು. ಮುಂದಿನ ಫ್ರೆಬ್ರುವರಿ ತಿಂಗಳಿನಲ್ಲಿ ನಿವೃತ್ತಿ ಆಗುವವರಿದ್ದರು. ಹುತಾತ್ಮ ಯೋಧನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆ ತಡವಾದ ಹಿನ್ನೆಲೆ ಯೋಧ ಧರ್ಮರಾಜ ಪಾರ್ಥಿವ ಶರೀರ ಗುರುವಾರ ಮಧ್ಯಾಹ್ನ ಸ್ವಗ್ರಾಮ ಕುಪ್ಪಾನವಾಡಿಗೆ ಆಗಮಿಸಲಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಹಿರಿಯ ಸೇನಾಧಿಕಾರಿಗಳು ಇಂಪಾಲಾದ ಸೈನ್ಯ ಶಿಬಿರದಲ್ಲಿ ಹುತಾತ್ಮ ಯೋಧರಿಗೆ ಅಂತಿಮ ಗೌರವ ಅರ್ಪಿಸಿದರು. ಅಂತಿಮ ಗೌರವ ಸಲ್ಲಿಸಿ ವಿಮಾನದ ಮೂಲಕ ಗೋವಾಗೆ ಪಾರ್ಥಿವ ಶರೀರ ರವಾನೆ ಮಾಡಲಿದ್ದು, ಗುರುವಾರ ರಸ್ತೆ ಮೂಲಕ ಸ್ವ ಗ್ರಾಮ ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಚಿಕ್ಕೋಡಿ ಉಪವಿಭಾಗದ ಅಧಿಕಾರಿ ಸಂಪಗಾವಿ ಹೇಳಿದ್ದಾರೆ.