ಬೆಳಗಾವಿ | ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಪತಿಯನ್ನು ಹತ್ಯೆಗೈದ ಪತ್ನಿ
ಬೆಳಗಾವಿ : ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿಲ್ಲವೆಂದು ಮಗಳ ಮೇಲೆ ಬಲಾತ್ಕಾರ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬರು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪತ್ನಿ ಸಾವಿತ್ರಿಯನ್ನು ಪೊಲೀಸರು ಬಂಧಿಸಿದ್ದು, ಮೃತ ಪತಿಯನ್ನು ಗ್ರಾಮದ ಶ್ರೀಮಂತ ಇಟ್ನಾಳೆ ಎಂದು ಗುರುತಿಸಲಾಗಿದೆ.
ಮಗಳ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದ ಶ್ರೀಮಂತ ಇಟ್ನಾಳೆಯನ್ನು ಹತ್ಯೆ ಮಾಡಿದ ಬಳಿಕ, ಪತ್ನಿ ಸಾವಿತ್ರಿ ಮೃತದೇಹವನ್ನು ಎರಡು ತುಂಡಾಗಿ ಕತ್ತರಿಸಿ ಪಕ್ಕದ ಗದ್ದೆಯಲ್ಲಿ ಎಸೆದಿದ್ದಾಳೆ. ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮೈ ಮೇಲಿನ ಬಟ್ಟೆಯನ್ನೆಲ್ಲ ಸುಟ್ಟು ಹಾಕಿ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾಳೆ. ಬಳಿಕ ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾಳೆ.
ಜಮೀನಿನಲ್ಲಿ ಮೃತದೇಹ ಕಂಡ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಅವರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.