ಸಾರ್ವಜನಿಕರ ವೀಕ್ಷಣೆಗಾಗಿ ವಸ್ತು ಪ್ರದರ್ಶನ, ದೀಪಾಲಂಕಾರ ವಿಸ್ತರಣೆ : ಡಿ.ಕೆ.ಶಿವಕುಮಾರ್
ಬೆಳಗಾವಿ : ʼಬೆಳಗಾವಿ ಅಧಿವೇಶನ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ದೀಪಾಲಂಕಾರ ಹಾಗೂ ವಸ್ತುಪ್ರದರ್ಶನದ ಕಾಲಾವಧಿಯನ್ನು ವಿಸ್ತರಣೆ ಮಾಡಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದುʼ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ತಿಲಕವಾಡಿಯಲ್ಲಿರುವ ವೀರ ಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಸಾರ್ವಜನಿಕರಿಗೆ ವಸ್ತು ಪ್ರದರ್ಶನ ವೀಕ್ಷಿಸಲು ಎಷ್ಟು ದಿನಗಳ ಕಾಲ ಅವಕಾಶ ನೀಡಲಾಗುವುದು ಹಾಗೂ ದೀಪಾಲಂಕಾರವನ್ನು ಎಷ್ಟು ದಿನ ಮುಂದುವರಿಸಲಾಗುವುದು ಎಂಬುದನ್ನು ಶುಕ್ರವಾರ ಸರ್ಕಾರದ ವತಿಯಿಂದ ಅಧಿಕೃತವಾಗಿ ಘೋಷಿಸಲಾಗುವುದುʼ ಎಂದು ತಿಳಿಸಿದರು.
ʼಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ದೇಶದ ಇತಿಹಾಸವನ್ನು ಸಂಭ್ರಮಿಸುವ ಕಾರ್ಯಕ್ರಮʼ. ಈ ಕಾರ್ಯಕ್ರಮ ನಡೆಸಲು ಬೆಳಗಾವಿಯ ಜನ ಹಾಗೂ ಸರ್ಕಾರಿ ಅಧಿಕಾರಿಗಳು ನಮಗೆ ಅತ್ಯುತ್ತಮವಾಗಿ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
1924ರ ಡಿ.26ರ ಮಧ್ಯಾಹ್ನ 3 ಗಂಟೆಗೆ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಅದೇ ಸಮಯಕ್ಕೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿದೆ. ಈ ಸಭೆ ಮೂಲಕ ಸಮಾಜದ ಎಲ್ಲ ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ದೇಶವನ್ನು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಬಿಜೆಪಿಯ ಅಸೂಯೆಗೆ ಮದ್ದಿಲ್ಲ:
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಭಾರತದ ನಕ್ಷೆ ತಪ್ಪಾಗಿ ಹಾಕಿರುವುದಕ್ಕೆ ಬಿಜೆಪಿ ದಾಳಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಗೊತ್ತಿಲ್ಲದೆ ಕೆಲವರು ಆ ನಕ್ಷೆ ಬಳಸಿದ್ದು, ಅವುಗಳನ್ನು ತೆರವುಗೊಳಿಸಲಾಗಿದೆ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಉಳಿದಂತೆ ಕಾರ್ಯಕ್ರಮ ಎಲ್ಲ ರೀತಿಯಲ್ಲೂ ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಇರುವುದೇ ನಮ್ಮ ವಿರುದ್ಧ ಅನವಶ್ಯಕ ದಾಳಿ ಮಾಡಲು. ಅವರ ಅಸೂಯೆಗೆ ಮದ್ದಿಲ್ಲ. ಅವರಿಗೆ ಏನು ಬೇಕೋ ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ತಿರುಗೇಟು ನೀಡಿದರು.