ಬೆಳಗಾವಿ | ಜಮೀನು ವಿಚಾರಕ್ಕೆ ಜಗಳ; ಮಹಿಳೆಯನ್ನು‌ ವಿವಸ್ತ್ರಗೊಳಿಸಿ ಹಲ್ಲೆ ಆರೋಪ

Update: 2025-03-18 19:40 IST
ಬೆಳಗಾವಿ | ಜಮೀನು ವಿಚಾರಕ್ಕೆ ಜಗಳ; ಮಹಿಳೆಯನ್ನು‌ ವಿವಸ್ತ್ರಗೊಳಿಸಿ ಹಲ್ಲೆ ಆರೋಪ

ಸಾಂದರ್ಭಿಕ ಚಿತ್ರ

  • whatsapp icon

ಬೆಳಗಾವಿ : ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

4 ಎಕರೆ 19 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಮಹಿಳೆಯೊಬ್ಬರನ್ನು‌ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. 2025ರ ಫೆ.20ರಂದು ಇದೇ ವಿಚಾರವಾಗಿ ಮತ್ತೆ ಜಗಳ ನಡೆದಿದ್ದು, ಪೊಲೀಸರ ಎದುರೇ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

"15ಕ್ಕೂ ಹೆಚ್ಚು ಜನ ರೈತ ಸಂಘದವರ ಮುಂದಾಳತ್ವದಲ್ಲಿ ಬಂದು ಹಲ್ಲೆ ನಡೆಸಿದರು. ನಾನು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆ. ಆದರೆ, ಅವರು ಸ್ಥಳಕ್ಕೆ ತಲುಪಿದ ಬಳಿಕವೂ ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ" ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

"ಅರಬೆತ್ತಲೆಯಾಗಿಯೇ ನಾನು ಸವದತ್ತಿ ಪೊಲೀಸ್ ಠಾಣೆಗೆ ಹೋದೆ. ಆದರೆ, ಪೊಲೀಸರು ದೂರು ದಾಖಲಿಸಲಿಲ್ಲ. ನನಗೆ ತೀವ್ರ ಪೆಟ್ಟು ಆಗಿದ್ದರಿಂದ ಪ್ರಾಥಮಿಕ ಚಿಕಿತ್ಸೆಗೆ ಸವದತ್ತಿ ತಾಲ್ಲೂಕು ಆಸ್ಪತ್ರೆಗೆ ತೆರಳಿ, ನಂತರ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ" ಎಂದು ಅವರು ಆರೋಪಿಸಿದ್ದಾರೆ.

ಇದೇ‌ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 2024ರ ಜೂನ್ 18 ಹಾಗೂ 2025ರ ಜನವರಿ 1ರಂದು ಎರಡು ಬಾರಿ ಸಂತ್ರಸ್ತ ಮಹಿಳೆ ದೂರು‌ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಡೆದಿಲ್ಲ : ಎಸ್ಪಿ ಸ್ಪಷ್ಟನೆ

ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯ ಮೇಲೆ ಕೆಲ ಮಹಿಳೆಯರಿಂದಲೇ ಹಲ್ಲೆ ಆಗಿರುವ ಆರೋಪವಿದೆ. ಆದರೆ, ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಡೆದಿಲ್ಲ. ಈ ಬಗ್ಗೆ ಇಲ್ಲಿಯವರೆಗೂ ಮಹಿಳೆ ದೂರು ನೀಡಿಲ್ಲ. ಫೆ.20ರಂದು ಹರ್ಲಾಪುರ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿಯ ಸಹೋದರರಿಯರ ಮಧ್ಯೆ ಗಲಾಟೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆದಿರುವುದು ಕಂಡುಬಂದಿಲ್ಲ. ಅಲ್ಲದೇ ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಲಾಗಿದ್ದು, ಅವರು ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆಸ್ಪತ್ರೆಗೆ ‌ಹೇಳಿಕೆ ಪಡೆಯಲು ಹೋದಾಗ ಹಿರಿಯರೊಂದಿಗೆ ಬಂದು ದೂರು ನೀಡುವುದಾಗಿ ತಿಳಿಸಿದ್ದರು. ಆದರೆ ಈ ವಿಚಾರವಾಗಿ ದೂರು ನೀಡಲು ಮಹಿಳೆ ವಾಪಸ್ ಠಾಣೆಗೆ ಬಂದಿಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News