ಕಾಂಗ್ರೆಸ್ ಸಂಘಟನಾ ಶಕ್ತಿ ಹೆಚ್ಚಿಸಿಕೊಳ್ಳಬೇಕು : ಮಲ್ಲಿಕಾರ್ಜುನ ಖರ್ಗೆ

Update: 2024-12-26 18:11 GMT

PC : x@kharge

ಬೆಳಗಾವಿ : ಕಾಂಗ್ರೆಸ್ ತನ್ನ ಸಂಘಟನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶಗಳಿಂದ ಉಂಟಾದ ನಿರಾಶೆಯ ವಾತಾವರಣವನ್ನು ತಿಳಿಗೊಳಿಸಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ಗುರುವಾರ ಬೆಳಗಾವಿಯ ತಿಲಕವಾಡಿಯಲ್ಲಿರುವ ವೀರಸೌಧದಲ್ಲಿ ʼಗಾಂಧಿ ಭಾರತ 100ʼ ಪ್ರಯುಕ್ತ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿಣಿಯ ವಿಸ್ತೃತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಂಸತ್ತಿನ ಅಧಿವೇಶನದಲ್ಲಿ, ದೃಢಸಂಕಲ್ಪ, ಸೃಜನಶೀಲತೆಯಿಂದ ಸರಕಾರವನ್ನು ಹಿಮ್ಮೆಟ್ಟಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಮತ್ತು ಪ್ರತಿಪಕ್ಷದಲ್ಲಿ ಹೊಸ ಶಕ್ತಿಯನ್ನು ಹುಟ್ಟುಹಾಕಿದೆ. ಕಠಿಣ ಪರಿಶ್ರಮವೊಂದೇ ಸಾಲದು, ಕಾಲಕ್ಕೆ ತಕ್ಕಂತೆ ಕಾರ್ಯ ತಂತ್ರವು ಅಗತ್ಯ ಎಂದು ಅವರು ಹೇಳಿದರು.

ಹೊಸ ಶಕ್ತಿಗೆ ಅವಕಾಶ ನೀಡುವ ಅಗತ್ಯವಿದೆ. ಸ್ಥಳೀಯ ಮತ್ತು ಹೊಸ ನಾಯಕತ್ವವನ್ನು ಎತ್ತಿ ಹಿಡಿಯುವ ಅವಶ್ಯಕತೆಯೂ ಇದೆ.2025 ಕಾಂಗ್ರೆಸ್ ಸಂಘಟನೆಗೆ ಶಕ್ತಿ ತುಂಬುವ ವರ್ಷವಾಗಲಿದೆ. ಕಾಂಗ್ರೆಸ್ ಪಕ್ಷ ದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಉದಯಪುರ ಘೋಷಣೆಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಭರವಸೆ ನೀಡದ ಕಾರಣ ಎಂಎಸ್‌ಪಿ ಖಾತ್ರಿ ಮತ್ತಿತರ ಬೇಡಿಕೆಗಳಿಗಾಗಿ ದೇಶಾದ್ಯಂತ ರೈತರು ಧರಣಿ ನಡೆಸುತ್ತಿದ್ದಾರೆ. ಆದರೆ ಅನ್ನದಾತನ ನೋವು ಅರ್ಥ ಮಾಡಿಕೊಳ್ಳುವವರೇ ಸರಕಾರದಲ್ಲಿ ಇಲ್ಲ. ಅದಕ್ಕಾಗಿಯೇ ಜನರ ಸಮಸ್ಯೆಗಳನ್ನು ಎತ್ತುವ ಪ್ರಯತ್ನವನ್ನು ಕಾಂಗ್ರೆಸ್ ಮುಂದುವರಿಸಬೇಕಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವವರೇ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆಡಳಿತರೂಢ ಪಕ್ಷದ ನಾಯಕರು ಕಾಂಗ್ರೆಸ್ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಂವಿಧಾನದ ಪೀಠಿಕೆಯನ್ನು ಅವಮಾನಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ನೆಹರೂ-ಗಾಂಧಿ ಅವರ ಸಿದ್ಧಾಂತ ಮತ್ತು ಬಾಬಾ ಸಾಹೇಬರ ಗೌರವಕ್ಕಾಗಿ ಕಾಂಗ್ರೆಸ್ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತದೆ. ಆದರೆ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚನೆ ಮತ್ತು ರಾಜೀನಾಮೆಗೆ ಒತ್ತಾಯಿಸುವ ಬದಲು, ಪ್ರಧಾನಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಬಿಜೆಪಿ ಸರಕಾರ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳು ಎದ್ದಿರುವುದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಜನರ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್, ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ತೆಲಂಗಾಣ ಸಿಎಂ ರೇವಂತ ರೆಡ್ಡಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಖಾಯಂ ಮತ್ತು ವಿಶೇಷ ಆಹ್ವಾನಿತರು, ಮಾಜಿ ಮುಖ್ಯಮಂತ್ರಿಗಳು , ರಾಜ್ಯ ಸಮಿತಿಗಳ ಅಧ್ಯಕ್ಷರು ಮತ್ತು ದೇಶಾದ್ಯಂತದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಉಪಸ್ಥಿತರಿದ್ದರು.

ಇಂದು ಕಾಂಗ್ರೆಸ್ ಇತಿಹಾಸದಲ್ಲಿ ಅತ್ಯಂತ ಸುವರ್ಣ ದಿನವಾಗಿದೆ. 100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ 1924ರ ಡಿ.26 ರಂದು ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಇಂದು ಇದೇ ಮಣ್ಣಿನಲ್ಲಿ ನಾವು ಆ ಐತಿಹಾಸಿಕ ಕ್ಷಣದ ಶತಮಾನೋತ್ಸವ ಆಚರಿಸುತ್ತಿದ್ದೇವೆ.

-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News