ಬೆಳಗಾವಿ | ವಿಕೋಪಕ್ಕೆ ತಿರುಗಿದ ಅಂಬೇಡ್ಕರ್ ಕುರಿತ ವಾಟ್ಸಾಪ್ ಸ್ಟೇಟಸ್; ಎರಡು ಗುಂಪುಗಳ ನಡುವೆ ಘರ್ಷಣೆ

ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮದ ಬಳಿಕ ಎರಡು ಗುಂಪಿನ ನಡುವಿನ ಭಿನ್ನಾಭಿಪ್ರಾಯ ಘರ್ಷಣೆಗೆ ಕಾರಣವಾಯಿತು. ಒಬ್ಬ ಯುವಕ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಂಬೇಡ್ಕರ್ ಕುರಿತು ಪೋಸ್ಟ್ ಮಾಡಿದ್ದು, ಇದರಿಂದ ವಾಗ್ವಾದ ಹುಟ್ಟಿಕೊಂಡಿತು. ನಂತರ, ಸ್ಟೇಟಸ್ ಹಾಕಿಕೊಂಡಿದ್ದ ಯುವಕ ಮತ್ತಷ್ಟು ಯುವಕರನ್ನು ಕರೆದುಕೊಂಡು ಬಂದು ಅಂಬೇಡ್ಕರ್ ಪ್ರತಿಮೆ ಸುತ್ತ ಹಾಕಲಾಗಿದ್ದ ಕಾಂಪೌಂಡ್ ಕೆಡವಿದ ಘಟನೆ ನಡೆದಿದೆ.
ಕಾಂಪೌಂಡ್ ಕೆಡವಿದ ಸುದ್ದಿ ತಿಳಿಯುತ್ತಿದ್ದಂತೆ ಅಂಬೇಡ್ಕರ್ ಕಾಲೋನಿಯ ಜನರು ಹಾಗೂ ಬೇರೊಂದು ಗುಂಪಿನ ಜನರ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿದು ಬಂದಿದೆ.
ಕಲ್ಲು ತೂರಾಟದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಪೊಲೀಸರು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿ ಇಡೀ ಗ್ರಾಮವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.