ಬೆಳಗಾವಿ ಅಧಿವೇಶನ | ವಿಧಾನಸಭೆಯಲ್ಲಿ ʼಭೂ ಕಂದಾಯ ತಿದ್ದುಪಡಿ ವಿಧೇಯಕʼ ಅಂಗೀಕಾರ
ಬೆಳಗಾವಿ : ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ ಹಾಗೂ ಸಣ್ಣ ಉದ್ದಿಮೆಗಳಿಗೆ ಸರಳ ಆಡಳಿತ ನೀಡುವ ಸಲುವಾಗಿ ತರಲಾಗಿರುವ 2024ನೇ ಸಾಲಿನ ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.
ವಿಧೇಯಕದ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಕರ್ನಾಟಕ ಭೂ ಕಂದಾಯ ಕಾನೂನು ಕಂದಾಯ ಇಲಾಖೆಯ ಅಡಿಪಾಯ. ಆದರೆ, ಈ ಕಾನೂನಿನಲ್ಲಿ ಕೆಲವು ವ್ಯಾಖ್ಯಾನಗಳು ಕ್ಲಿಷ್ಟಕರವಾಗಿದೆ. ಹೀಗಾಗಿ ಈ ಕಾನೂನುಗಳನ್ನು ಸರಳೀಕರಣಗೊಳಿಸಿ ಸರಕಾರಿ ಆಸ್ತಿಗಳ ರಕ್ಷಣೆಗೆ ಮತ್ತಷ್ಟು ಬಲ ತುಂಬುವ ಹಾಗೂ ಸಣ್ಣ ಉದ್ದಿಮೆದಾರರಿಗೆ ಸರಳ ಆಡಳಿತ ನೀಡುವ ಸಲುವಾಗಿ ಈ ಕಾನೂನಿಗೆ ಪ್ರಮುಖ ನಾಲ್ಕು ತಿದ್ದುಪಡಿಗಳನ್ನು ತರಲಾಗಿದೆ’ ಎಂದು ತಿಳಿಸಿದರು.
ಯಾವುದೇ ಜಮೀನು ಖಾಸಗಿ ವ್ಯಕ್ತಿಗೆ ಸೇರಿಲ್ಲದಿದ್ದಲ್ಲಿ ಅದು ಸರಕಾರಕ್ಕೆ ಸೇರಿದೆ ಎಂಬ ಸಾರಾಂಶವನ್ನು ಕರ್ನಾಟಕ ಭೂ ಕಂದಾಯ ಕಾನೂನಿನ ಕಲಂ 67 ಹೇಳುತ್ತದೆ. ಕೆಲವರು ತಮ್ಮ ಹೆಸರಿಗೆ ಸದರಿ ಜಮೀನುಗಳ ಖಾತೆ ಮಾಡಿಕೊಡಿ ಎಂದು ತಹಶೀಲ್ದಾರರಿಗೆ ಮನವಿ ಮಾಡುತ್ತಾರೆ. ಆದರೆ, ಅವರ ಬಳಿ ಜಮೀನಿನ ಮಾಲಕತ್ವ ನಿರೂಪಿಸುವ ಮೂಲ ದಾಖಲೆ ಅಥವಾ ಸಮರ್ಪಕ ದಾಖಲೆ ಇಲ್ಲದಿದ್ದರೆ ಅವರಿಗೆ ಜಮೀನಿನ ಖಾತೆ ಮಾಡಿಕೊಡುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ತಹಶೀಲ್ದಾರರು ಖಾತೆ ಮಾಡಿಕೊಡದಿದ್ದಲ್ಲಿ ಅರ್ಜಿದಾರರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅಪೀಲು ಹೋಗುತ್ತಿದ್ದರು. ಆದರೆ, ಈ ಅಪೀಲನ್ನು ಉಪ ವಿಭಾಗಾಧಿಕಾರಿ ರ್ಯಾಂಕ್‍ನ ಮೇಲ್ಪಟ್ಟ ಅಧಿಕಾರಿಯೇ ಆಲಿಸಬೇಕು ಎಂದು ಈ ಹಿಂದಿನ ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿತ್ತು. ಹೀಗಾಗಿ ಇಂತಹ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳೇ ನ್ಯಾಯ ತೀರ್ಮಾನ ಮಾಡುತ್ತಿದ್ದರು. ಆದರೆ, ಕೆಲವು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೇ ಸಾರ್ವಜನಿಕ ಹಿತಾಸಕ್ತಿಯ ವಿರುದ್ಧ ಆದೇಶ ಮಾಡಿರುವ ಉದಾಹರಣೆಗಳಿವೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲೇ ಇಂತಹ ಹಲವು ಪ್ರಕರಣಗಳು ನಡೆದಿವೆ. ಖಾಸಗಿಯವರಿಗೆ ಮ್ಯುಟೇಷನ್ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಆದೇಶಿಸಿ, ಅವರ ಹೆಸರಿನಲ್ಲಿ ಖಾತೆಯೂ ಆಗೋಗಿರುವ ಸಾಕಷ್ಟು ಘಟನೆಗಳು ಸಂಭವಿಸಿವೆ ಎಂದು ಕೃಷ್ಣ ಬೈರೇಗೌಡ ವಿಷಾದಿಸಿದರು.
ಹೊಸ ತಿದ್ದುಪಡಿಯ ಪ್ರಕಾರ ಸರಕಾರಕ್ಕೆ ಕಾನೂನು ಹೋರಾಟ ನಡೆಸಲು ಹೆಚ್ಚಿನ ಕಾಲಾವಕಾಶ ಸಿಗಲಿದೆ. ಮೊದಲ ಅಪೀಲಿನಲ್ಲಿ ಉಪ-ವಿಭಾಗಾಧಿಕಾರಿಗಳು ತಪ್ಪು ಆದೇಶ ಮಾಡಿದರೂ ಸಹ, ಜಿಲ್ಲಾಧಿಕಾರಿಗಳಲ್ಲಿ ಎರಡನೇ ಅಪೀಲು ಹೋಗಬಹುದು. ಮೂರನೇ ಅಪೀಲಿಗೆ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಅಸ್ಥಿತ್ವದಲ್ಲಿದ್ದು ಅಲ್ಲಿಗೂ ಮೊರೆ ಹೋಗಬಹುದು” ಎಂದು ಅವರು ಮಾಹಿತಿ ನೀಡಿದರು.
ತಹಶೀಲ್ದಾರರಿಗೆ ಒತ್ತುವರಿ ತೆರವಿನ ಪರಮಾಧಿಕಾರ: ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಸರಕಾರಿ ಜಮೀನು ಒತ್ತುವರಿಯಾಗಿದ್ದರೆ. ಅದನ್ನು ತೆರವುಗೊಳಿಸುವ ಸಂಪೂರ್ಣ ಅಧಿಕಾರ ತಹಶೀಲ್ದಾರರಿಗೆ ಇದೆ. ಆದರೆ, ಕರ್ನಾಟಕ ಭೂ ಕಂದಾಯ ಸೆಕ್ಷನ್ 104 ಕಾನೂನನ್ನು ಈ ಹಿಂದೆ ತುಂಬಾ ಕ್ಲಿಷ್ಟಕರವಾಗಿ ವ್ಯಾಖ್ಯಾನಿಸಲಾಗಿತ್ತು. ಆದರೆ, ಇದೀಗ ಈ ಕಾನೂನನ್ನು ಸರಳೀಕರಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ತಿದ್ದುಪಡಿ: ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲೂ ಸಹ ಕರ್ನಾಟಕ ಭೂ ಕಂದಾಯ ವಿಧೇಯಕ್ಕೆ ಮಹತ್ವದ ತಿದ್ದುಪಡಿ ತರಲಾಗಿದೆ. ಟೌನ್ ಪ್ಲಾನಿಂಗ್‍ನಲ್ಲಿ ಈಗಾಗಲೇ ಕೈಗಾರಿಕಾ ಝೋನ್ ಎಂದು ನಮೂದಿಸಿದ್ದರೆ ಅಥವಾ ರೆಡ್ ಝೋನ್, ಯೆಲ್ಲೋ ಝೋನ್ ಎಂದು ಗುರುತಿಸಲಾಗಿದ್ದರೆ ಸಣ್ಣ ಕೈಗಾರಿಕೆಗಳ ಮಾಲಕರು ಮತ್ತೆ ನಮ್ಮ ಬಳಿ ಬಂದು ಕೈಗಾರಿಕಾ ವಲಯ ಎಂದು ಪರಿವರ್ತನೆಗೆ ಅನುಮತಿ ಕೇಳುವ ಅಗತ್ಯ ಇಲ್ಲ. ಎರಡು ಎಕರೆವರೆಗೆ ಪರಿವರ್ತನೆ ಅವಕಾಶ ತೆಗೆದುಹಾಕಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.