ಅಹಿಂಸಾ ಶಕ್ತಿಯಿಂದ ಸಾಮ್ರಾಜ್ಯ ಪತನ ಮಾಡಿದ್ದು ಭಾರತದಲ್ಲಿ ಮಾತ್ರ : ಪ್ರಿಯಾಂಕಾ ಗಾಂಧಿ

Update: 2025-01-21 19:57 IST
ಅಹಿಂಸಾ ಶಕ್ತಿಯಿಂದ ಸಾಮ್ರಾಜ್ಯ ಪತನ ಮಾಡಿದ್ದು ಭಾರತದಲ್ಲಿ ಮಾತ್ರ : ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ | PC:x/@priyankagandhi
  • whatsapp icon

ಬೆಳಗಾವಿ : ಹಿಂದಿನ ಕಾಲದಲ್ಲಿ ಒಂದು ಸಾಮ್ರಾಜ್ಯ ಉರಳಿಸಲು ಹಿಂಸಾಚಾರ ಆಗುತ್ತಿತ್ತು. ಆದರೆ, ಮಹಾತ್ಮ ಗಾಂಧಿ, ನೆಹರು, ಅಂಬೇಡ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಹಿಂಸಾಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಪ್ರಪಂಚದಲ್ಲಿ ಅಹಿಂಸಾ ಶಕ್ತಿಯಿಂದ ಒಂದು ಸಾಮ್ರಾಜ್ಯವನ್ನು ಪತನ ಮಾಡಿದ್ದು ಭಾರತದಲ್ಲಿ ಮಾತ್ರ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದರು.

ಮಂಗಳವಾರ ಬೆಳಗಾವಿ ಕ್ಲಬ್ ರಸ್ತೆಯಲ್ಲಿರುವ ಸಿಪಿಇಡಿ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಐತಿಹಾಸಿಕ ‘ಜೈ ಬಾಪು-ಜೈ ಭೀಮ್- ಜೈ ಸಂವಿಧಾನ’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಹಿರಿಯರು ಸ್ವಾತಂತ್ರ್ಯ ಹೋರಾಟವನ್ನು ಸತ್ಯದ ದಾರಿಯಲ್ಲಿ ಅಹಿಂಸಾ ಮಾರ್ಗದಲ್ಲಿ ಮಾಡಿದರು. ಬೆಳಗಾವಿಯ ಈ ಪುಣ್ಯಭೂಮಿ ದೇಶದ ಹೆಮ್ಮೆಯ ನೆಲವಾಗಿದೆ. ಬೆಳಗಾವಿಯಲ್ಲಿ ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟರು. ಇದೇ ಪುಣ್ಯ ಭೂಮಿಯಲ್ಲಿ ನೂರು ವರ್ಷದ ಹಿಂದೆ ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧಿ ಚಾಲನೆ ಕೊಟ್ಟಿದ್ದರು ಎಂದು ಅವರು ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬಸವಣ್ಣನವರ ಫೋಟೋ ನೋಡಿದೆ. ಅದರಲ್ಲಿ ಬಸವಣ್ಣನವರ ಮುಂದೆ ಅಕ್ಕ ಮಹಾದೇವಿ ನಿಂತಿದ್ದರು. ಇದು ಕರ್ನಾಟಕದ ಪ್ರಜಾಪ್ರಭುತ್ವ ವನ್ನು ಸಾರುತ್ತದೆ. ಸ್ವಾತಂತ್ರ್ಯ ಹೋರಾಟದ ಬಳಿಕವೇ ಸಂವಿಧಾನ ಬಂತು. ಸಂವಿಧಾನ ಅಂದರೆ ಏನು, ಸಂವಿಧಾನ ನಮ್ಮೆಲ್ಲರ ಜೀವನದಲ್ಲಿ ಮಹತ್ವದ್ದಾಗಿದೆ. ಈ ಸಂವಿಧಾನವೇ ನಮ್ಮೆರಲ್ಲನ್ನು ಕಾಪಾಡುವ ರಕ್ಷಾ ಕವಚವಾಗಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.

ನಮ್ಮ ಸಂವಿಧಾನದಲ್ಲಿ ಮತ ಹಾಕುವ ಅಧಿಕಾರ, ನಿಮ್ಮ ಇಷ್ಟದ ಸರಕಾರವನ್ನು ರಚಿಸುವ ಅಧಿಕಾರ ಕೊಟ್ಟಿದ್ದಾರೆ. ಸಂವಿಧಾನದಲ್ಲಿ ಸಮಾನತೆಯ ಅವಕಾಶ ಕೊಡಲಾಗಿದೆ. ಸಾಕಷ್ಟು ಸರಕಾರಗಳು ಬಂದು ಹೋಗಿವೆ. ಇದರಲ್ಲಿ ಕಾಂಗ್ರೆಸ್ ಅಲ್ಲದೇ ಎಲ್ಲ ಪಕ್ಷದ ಸರಕಾರಗಳು ಸೇರಿವೆ. ಆದರೆ, ಯಾವುದೇ ಸರಕಾರದಲ್ಲಿ ಸಂಸತ್ತಿನಲ್ಲಿ ನಿಂತುಕೊಂಡು ಅಂಬೇಡ್ಕರ್‌ ರನ್ನು ಅಪಮಾನ ಮಾಡುವ ಕೆಲಸ ಯಾರು ಮಾಡಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ದೇಶಾದ್ಯಂತ ಓಡಾಡಿ ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತಾ ಹೇಳುವ ಮಂತ್ರಿಯನ್ನು ನೋಡಿಲ್ಲ. ಅಂಬೇಡ್ಕರ್ ಅವರನ್ನು ಈ ರೀತಿ ಅಪಮಾನ ಮಾಡುವ ಕೆಲಸ ಸರಕಾರ ಮಾಡುತ್ತೆ ಎಂದು ಯಾರು ಭಾವಿಸಿರಲಿಲ್ಲ. ಅಂಬೇಡ್ಕರ್ ಅವರನ್ನು ಅಪಮಾನಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರನ್ನು ಕೇಂದ್ರ ಸರಕಾರ ಅವಮಾನಿಸಿದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಗಾರಿದರು.

ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಬೇವರು, ರಕ್ತಕೊಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದ ವೇಳೆಯೂ ಪ್ರತ್ಯೇಕ ವಿಚಾರಧಾರೆಯನ್ನು ಬಿತ್ತಲಾಗುತ್ತಿತ್ತು. ಸಂವಿಧಾನವನ್ನು ಅಂದು ವಿರೋಧ ಮಾಡಿದ್ದರು. ಅಂಬೇಡ್ಕರ್ ಅವರು ಮಹಿಳಾ ಸಮಾನತೆಯ ಬಗ್ಗೆ ಮಾತನಾಡಿದಾಗ ಅವರ ವಿರುದ್ಧ ಪ್ರತಿಭಟನೆಗಳನ್ನು ನಡೆಸಲಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಂತಹ ವಿಚಾರಧಾರೆಗಳಿಂದ ಹುಟ್ಟಿರೋದು ಬಿಜೆಪಿ ಪಕ್ಷ. ನಿರಂತರವಾಗಿ ಸಂವಿಧಾನ ವಿರೋಧಿಸುವುದು ಬಿಜೆಪಿ ಕಾಯಕ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದಕ್ಕೆ ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿದರು. ಅನಂತರ ಸಂಸತ್ತಿನಲ್ಲಿ ಸಂವಿಧಾನಕ್ಕೆ ಮೋದಿ ಹಣೆ ಹಚ್ಚಿ ನಮಸ್ಕಿರಿಸಿದರು. ನೀವು ಬಿಜೆಪಿಯವರು ಗಾಬರಿ ಆಗುವಂತೆ ಮಾಡಿದ್ದೀರಿ ಎಂದು ಪ್ರಿಯಾಂಕಾ ಗಾಂಧಿ ಮೆಚ್ಚುಗೆ ಸೂಚಿಸಿದರು.

ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರು ಸಂವಿಧಾನದ ವಿರೋಧಿಗಳಾಗಿದ್ದಾರೆ. ಕೇಂದ್ರ ಸರಕಾರ ಸಂವಿಧಾನವನ್ನು ಕೇವಲವಾಗಿ ಕಾಣುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಕೇವಲ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಅವಮಾನ ಮಾಡಿಲ್ಲ, ಇಡೀ ನಾಡಿಗೆ ದೊಡ್ಡ ಕೊಡುಗೆ ನೀಡಿದ ಧೀಮಂತನನ್ನು ಅವಮಾನ ಮಾಡಿದ್ದಾರೆ. ಯಾರು ನಾಡಿಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೋ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಗಾರಿದರು.

ಇಂದು ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಆದರೆ, ಅಂದೇ ಬಾಬಾಸಾಹೇಬ್ ಅಂಬೇಡ್ಕರ್ ಈ ಬಗ್ಗೆ ಚಿಂತನೆ ಮಾಡಿದ್ದರು. ಆರೆಸ್ಸೆಸ್ ಹಾಗೂ ಬಿಜೆಪಿ ಅಂಬೇಡ್ಕರ್ ಅವರ ಚಿಂತನೆ ಪುಸ್ತಕ ಸುಟ್ಟು ಹಾಕಿದರು. ಬಿಜೆಪಿ ಇಂತಹ ತತ್ವ ಸಿದ್ಧಾಂತ ಇರಿಸಿಕೊಂಡು ಬಂದಿದೆ ಎಂದು ಅವರು ದೂರಿದರು.

ಜನರಿಗೆ ಶಕ್ತಿ ತುಂಬುವ ಆರ್‌ಟಿಐ ಕಾಯ್ದೆ ರದ್ದು ಮಾಡಲು ಹೊರಟಿದ್ದಾರೆ. ಲೋಕಪಾಲ್ ಕಾಯ್ದೆ ಅಶಕ್ತ ಮಾಡಿದ್ದಾರೆ. ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಕಡೆ ಮಹಿಳೆಯರ ಮೇಲೆ ಹಲ್ಲೆ ಮಾಡಿದವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ನೂರಾರು ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾನೆ. 1 ಲಕ್ಷ ರೂ. ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆ ಗಗನಕ್ಕೇರಿದೆ. ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿದ್ದಾರೆ. ಅದಾನಿ, ಅಂಬಾನಿಗಳ ತೆರಿಗೆ ಹೆಚ್ಚಿಸಿದ್ದೀರಾ? ಬಂಡವಾಳ ಶಾಹಿಗಳ 17 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಅನಾರೋಗ್ಯದ ಕಾರಣ ನನ್ನ ಅಣ್ಣ ರಾಹುಲ್ ಗಾಂಧಿ ಈ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರು ದೇಶಕ್ಕಾಗಿ ಪ್ರತಿಕ್ಷಣ ಹೋರಾಡುತ್ತಿದ್ದಾರೆ. ಆಡಳಿತರೂಢ ಬಿಜೆಪಿಗೆ ರಾಹುಲ್ ಬಗ್ಗೆ ಭಯವಿದೆ. ಸತ್ಯದ ಪರವಾಗಿ ಹೋರಾಡುವ ರಾಹುಲ್ ಅವರನ್ನು ನೋಡಿದರೆ ಬಿಜೆಪಿಯವರು ಹೆದರುತ್ತಾರೆ. ಅವರ ವಿರುದ್ಧ ನೂರಾರು ಮೊಕದ್ದಮೆಗಳನ್ನು ಹಾಕಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವ ನಾಯಕರು ಬಿಜೆಪಿಯನ್ನು ಕಂಡರೆ ಹೆದರಲ್ಲ. ಸಂವಿಧಾನವೇ ನಮ್ಮ ಸಿದ್ಧಾಂತ. ಸಮಾನತೆ, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನರಿಗಾಗಿ ನಮ್ಮ ಜೀವ ತ್ಯಾಗ ಮಾಡಲು ಸಿದ್ಧರಿದ್ದೇವೆ.

-ಪ್ರಿಯಾಂಕಾ ಗಾಂಧಿ, ಸಂಸದೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News