ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ; ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ಬೆಂಗಳೂರು: ಸಹಕಾರಿ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷದಿಂದ 5 ಲಕ್ಷ ರೂ.ವರೆಗೆ ಸಾಲ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್‍ನ ಪ್ರಶೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್‍ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನ ನಾವು ರಾಜ್ಯದ ಜನತೆಗೆ 3ರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಭರವಸೆ ಕೊಟ್ಟಿದ್ದೆವು. ಅದರಂತೆ ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ನುಡಿದಂತೆ ನಡೆದುಕೊಳ್ಳಲು ನಮ್ಮ ಸರಕಾರ ಬದ್ಧವಾಗಿದೆ ಎಂದರು.
ಪ್ರತಿಯೊಬ್ಬ ರೈತರಿಗೆ 3ರಿಂದ 5 ಲಕ್ಷ ರೂ.ದವರೆಗೆ ಸಾಲ ನೀಡಲು ಸಾಧ್ಯವಾಗುವುದಿಲ್ಲ. ಜಮೀನು ಲಭ್ಯತೆ, ಸಾಲ ಮರು ಪಾವತಿಸುವ ರೈತರ ಸಾಮರ್ಥ್ಯವನ್ನು ಪರಿಗಣಿಸಿ ಸಾಲದ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ. ಆದರೂ, ನಾವು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದು ಕೆ.ಎನ್.ರಾಜಣ್ಣ ಹೇಳಿದರು.
ರೈತರಿಗೆ 10 ಲಕ್ಷ ರೂ.ವರೆಗೂ ಸಾಲ ನೀಡುವ ಗುರಿ ಹೊಂದಲಾಗಿದೆ. ನಮಗೆ ನಬಾರ್ಡ್‍ನಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಪ್ರಸಕ್ತ ವರ್ಷ 936 ಕೋಟಿ ರೂ. ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಮಗೆ ಹೆಚ್ಚಿನ ಸಾಲವನ್ನು ನೀಡುವಂತೆ ಪ್ರಧಾನಿ, ಹಣಕಾಸು ಸಚಿವರು, ನಬಾರ್ಡ್ ಮುಖ್ಯಸ್ಥರಿಗೂ ಮನವಿ ಮಾಡಲಾಗಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಹಿಂದಿನ ವರ್ಷ ನಾವು ರೈತರಿಗೆ 5600 ಕೋಟಿ ರೂ. ಸಾಲವನ್ನು ನೀಡಿದ್ದೇವೆ. ನಬಾರ್ಡ್‍ನವರು ಸಾಲದ ಪ್ರಮಾಣವನ್ನು ಕಡಿತ ಮಾಡಿದ್ದರಿಂದ ನಮ್ಮ ಗುರಿ ತಲುಪಲು ಸಾಧ್ಯವಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದವರು ನಬಾರ್ಡ್‍ಗೆ ಸಾಲ ನೀಡುತ್ತಾರೆ. ಅವರು ಅಪೆಕ್ಸ್ ಬ್ಯಾಂಕ್‍ಗೆ ನೀಡುತ್ತಾರೆ. ಅಪೆಕ್ಸ್ ಬ್ಯಾಂಕ್‍ನವರು ವಿವಿಧ ಸಂಘ ಸಂಸ್ಥೆಗಳಿಗೆ ನೀಡುತ್ತಾರೆ ಎಂದು ಕೆ.ಎನ್.ರಾಜಣ್ಣ ವಿವರಿಸಿದರು.
ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ನೀಡಲಾಗುತ್ತದೆ. ಅವರ ಯಾವ ಬೆಳೆಗಳಿಗೆ ಎಷ್ಟು ಪ್ರಮಾಣದ ಸಾಲ ನೀಡಬೇಕು ಎಂಬುದನ್ನು ಅಧಿಕಾರಿಗಳು ತೀರ್ಮಾನಿಸುತ್ತಾರೆ. ಬೆಳೆಗಳ ಸಾಮಥ್ರ್ಯಕ್ಕೆ ಅನುಗುಣವಾಗಿ ನಾವು ಸಾಲ ವಿತರಿಸುತ್ತೇವೆ. ಅಪೆಕ್ಸ್ ಬ್ಯಾಂಕ್ ನೇರವಾಗಿ ಎಲ್ಲಿಯೂ ಸಾಲ ನೀಡುವುದಿಲ್ಲ. ಸಹಕಾರ ಸಂಸ್ಥೆಗಳ ಡೆಪಾಸಿಟ್ ಆಧಾರದ ಮೇಲೆ ಸಾಲ ವಿತರಣೆಯಾಗುತ್ತದೆ ಎಂದು ಕೆ.ಎನ್.ರಾಜಣ್ಣ ಹೇಳಿದರು.
ರಾಜ್ಯದ 19 ಕೃಷಿ ವಲಯಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಪ್ರತಿ ಬೆಳೆಗೆ ನಿಗದಿಪಡಿಸಿದ ಸ್ಕೇಲ್ ಆಫ್ ಫೈನಾನ್ಸ್ ಮಿತಿ, ರೈತರು ಹೊಂದಿರುವ ಭೂ ಹಿಡುವಳಿ ಹಾಗೂ ಬೆಳೆಯುವ ಬೆಳೆ ಆಧರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಗರಿಷ್ಠ ಸಾಲದ ಮಿತಿಯನ್ನು ನಿಗದಿಪಡಿಸಿದ್ದು ಇದರನ್ವಯ 1,73,449 ರೈತರು 3.00 ಲಕ್ಷದಿಂದ 5 ಲಕ್ಷ ರೂ.ವರೆಗಿನ ಬೆಳೆಸಾಲ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಅರ್ಹತೆ ಇರುವ ರೈತ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.