ಬಳ್ಳಾರಿ | ʼತೋರಣಗಲ್ಲು ಚಾರಿತ್ರಿಕ ಅಧ್ಯಯನʼ ಪುಸ್ತಕ ಬಿಡುಗಡೆ
ಬಳ್ಳಾರಿ : ತೋರಣಗಲ್ಲು ಚಾರಿತ್ರಿಕ ಅಧ್ಯಯನ ಪುಸ್ತಕದಲ್ಲಿ ಬಹುತ್ವ ಸಂಸ್ಕೃತಿ, ಸಂಡೂರಿನ ಹಸಿರೀಕರಣ, ತೋರಣಗಲ್ಲು ಗ್ರಾಮದ ಸಂಸ್ಕೃತೀಕರಣವನ್ನು ಬಿಂಬಿಸಲಾಗಿದೆ. ಈ ಪುಸ್ತಕವು ಸೌಹಾರ್ದತೆಯ ಸಂಕೇತವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ ಹೇಳಿದ್ದಾರೆ.
ಅವರು ತೋರಣಗಲ್ಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೇಖಕ ಅಬ್ದುಲ್ ಹೈ ಅವರ ʼತೋರಣಗಲ್ಲು ಚಾರಿತ್ರಿಕ ಅಧ್ಯಯನʼ ಪುಸ್ತಕ ಜನಾರ್ಪಣೆಯ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಡಿನ ಕವಿ, ಸಾಹಿತಿ, ಲೇಖಕ ಹಾಗೂ ವಿವಿಧ ಕಲೆಗಳ ಕಲಾವಿದರ ಬೆಳವಣಿಗೆಗೆ ಸ್ಥಳೀಯರ ಪ್ರೋತ್ಸಾಹ, ಸಹಕಾರ ಅಗತ್ಯ ಎಂದರು. ಈ ಪುಸ್ತಕವು ಸೌಹಾರ್ದತೆಯ ಸಂಕೇತವಾಗಿದ್ದು, ಮುಖ್ಯವಾಗಿ ಗ್ರಾಮದ ಸುತ್ತಲಿನ ಪರಿಸರ ಸಂರಕ್ಷಣೆ ಬಗ್ಗೆ ಅಬ್ದುಲ್ ಹೈ ಉಲ್ಲೇಖಿಸಿದ್ದಾರೆ ಎಂದರು.
ಸಂಸ್ಕೃತಿಯ ಚಿಂತಕ ತೋರಣಗಲ್ಲು ಶಂಕ್ರಪ್ಪ ಪುಸ್ತಕದ ಕುರಿತು ಟೀಕೆ, ವಿಮರ್ಶೆಯ ಬಗ್ಗೆ ಮಾತನಾಡಿದರು.
ಪುಸ್ತಕದ ಜನಾರ್ಪಣೆಯ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಚಾಂದ್, ಬಸಯ್ಯ ಸ್ವಾಮಿ, ಸಿದ್ದಾರ್ಥ ಎಂ.ಎಸ್., ಸಿಕಂದರ್ ಅಲಿ, ಇಬ್ರಾಹಿಂ ಖಲೀಲ್, ನೂರ್ ಅಹ್ಮದ್, ನೀಲಮ್ಮ, ಮನೀಷಾ ಪಾಟೀಲ, ಸ್ನೇಹಲತಾ ಗೌನಳ್ಳಿ, ರಂಜಾನ್ ಹೆಬಸೂರ್ ಕವನ ವಾಚಿಸಿದರು.
ಲೇಖಕ ಅಬ್ದುಲ್ ಹೈ, ಅಂಗಡಿ ಮಲ್ಲಿಕಾರ್ಜುನ, ಜಿ.ಬಸವರಾಜ್, ಬಂಡ್ರಿಲಿಂಗಪ್ಪ, ಕೆ.ದಮ್ಮೂರಪ್ಪ, ಶೇಕಮ್ಮ, ಯಾಸ್ಮಿನ್, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತೋರಣಗಲ್ಲು ಕುರಿತಾಗಿ ಅಚ್ಚುಕಟ್ಟಾದ ಪಸ್ತಕವನ್ನು ಬರೆದಿರುವ ಲೇಖಕ ಅಬ್ದುಲ್ ಹೈ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.